

ಮೈಸೂರು: ಮಕ್ಕಳು ಸಮಾಜದ ನೆಮ್ಮದಿಯ ಕೇಂದ್ರಗಳು. ಅವರ ಒಡನಾಟ ಬದುಕಿನ ಯಾಂತ್ರಿಕತೆಯ ಒತ್ತಡವನ್ನು ಕಡಿಮೆ ಮಾಡಬಲ್ಲವು. ಆದರೆ ಮಕ್ಕಳ ಬಾಲ್ಯದ ಸಂಭ್ರಮವನ್ನು ಅವರ ಮೇಲೆ ಶೈಕ್ಷಣಿಕ ಒತ್ತಡವನ್ನು ಹೇರುವುದರ ಮೂಲಕ ನಾಶಗೊಳಿಸುತ್ತಿದ್ದೇವೆ ಎಂದು ಧ್ವನಿ ಫೌಂಡೇಷನ್ ಸ್ಥಾಪಕಾಧ್ಯಕ್ಷೆ ಡಾ. ಶ್ವೇತಾ ಮಡಪ್ಪಾಡಿ ಹೇಳಿದರು.
ಮೈಸೂರಿನ ರೋಟರಿ ಬೃಂದಾವನ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಮಕ್ಕಳ ಪದವಿ ಪ್ರಧಾನ ಹಾಗೂ ’ಅಜ್ಜ-ಅಜ್ಜಿಯರ ದಿನಾಚರಣೆ’ ಸಮಾರಂಭದಲ್ಲಿ ಬುಧವಾರ ಮಾತನಾಡಿದರು.
ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅತಿ ಕಾಳಜಿ ತೋರುವ ಹೆತ್ತವರು ಹಲವು ಬಾರಿ ಅವರ ಆಯ್ಕೆಗಳ ವಿಷಯದಲ್ಲಿ ಎಡವುತ್ತಾರೆ. ಅತಿಯಾದ ಶೈಕ್ಷಣಿಕ ಒತ್ತಡ ಮಕ್ಕಳ ಮನೋವಿಕಾಸ ಕುಗ್ಗಿಸಿ ಭವಿಷ್ಯಕ್ಕೆ ಹೊಡೆತ ನೀಡಬಲ್ಲುದು. ಹಾಗಾಗಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದೇ ಶಿಕ್ಷಣದ ಬಹುಮುಖ್ಯ ಆದ್ಯತೆ ಆಗಿರಬೇಕು ಎಂದು ಹೇಳಿದರು.
ರೋಟರಿ ಬೃಂದಾವನದ ಅಧ್ಯಕ್ಷ ಎ.ಜಿ. ನಂಜಪ್ಪಸ್ವಾಮಿ, ಕಾರ್ಯದರ್ಶಿ ಮಂಜುನಾಥ್ ಸದಸ್ಯರಾದ ನಾಗೇಶ್, ಪ್ರಕಾಶ್ ಹನಸೋಗೆ, ಶಾಲೆ ಮುಖ್ಯ ಶಿಕ್ಷಕಿ ಎಂ.ಎಸ್.ಉಷಾ ಇತರರು ಇದ್ದರು.
ಯುಕೆಜಿ ಮಕ್ಕಳಿಗೆ ಪದವಿ ಪ್ರದಾನ ಮಾಡಲಾಯಿತು. ಮಕ್ಕಳಿಂದ ಹಾಗೂ ಮಕ್ಕಳ ಅಜ್ಜ ಅಜ್ಜಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.