ಕ್ಷಣಿಕ ಸಂತೋಷಕ್ಕೆ ಜೀವನ ಹಾಳಾಗದಿರಲಿ: ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯಾ

1
Published on

ಮೈಸೂರು: ಕ್ಷಣಿಕ ಸಂತೋಷಗಳಿಗಾಗಿ ನಿಮ್ಮ ಜೀವನ ಅರ್ಪಿಸಿಕೊಳ್ಳಬೇಡಿ. ನಿಮ್ಮ ಭವಿಷ್ಯಕ್ಕಾಗಿ ಮುಂದಿನ ಗುರಿ ಏನೆಂಬುದನ್ನು ಆಯ್ಕೆ ಮಾಡಿಕೊಂಡು ಅದರ ಈಡೇರಿಕೆಗಾಗಿ ಇಂದಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಮೈಸೂರು ವಿಭಾಗದ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯಾ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ 2024-25ನೇ ಶೈಕ್ಷಣಿಕ ಸಾಲಿಗೆ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಪರಿಚಯಾತ್ಮಕ ಹಾಗೂ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲಿ ಏಕಾಗ್ರತೆ, ಪರಿಶ್ರಮ ಬಹು ಮುಖ್ಯ. ಮನಸ್ಸು ನಿಗ್ರಹದಲ್ಲಿ ಇಟ್ಟುಕೊಂಡು ಅಭ್ಯಾಸದಲ್ಲಿ ತೊಡಗಬೇಕು. ಆದರೆ ಕ್ಷಣಿಕ ಸಂತೋಷಕ್ಕಾಗಿ ಸಾಕಷ್ಟು ವಿದ್ಯಾರ್ಥಿಗಳು ಭವಿಷ್ಯವನ್ನೇ ಮಂಕು ಮಾಡಿಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವ ಹೃದಯ ಮತ್ತು ಮಿದುಳು ಎರಡೂ ಹಲವು ಆಸಕ್ತಿಗಳನ್ನು ಹೊಂದಿರುತ್ತವೆ. ಹೃದಯ ಓದುವುದನ್ನು ಬಯಸಿದರೆ ಮಿದುಳು ಮೊಬೈಲ್ ನೋಡುವುದನ್ನು, ರೀಲ್ಸ್ ಮಾಡುವುದನ್ನು ಬಯಸಬಹುದು. ಹಾಗಾಗಿ ನಿಮ್ಮ ಆಯ್ಕೆ ಓದನ್ನು ಬಯಸುವಂತಿರಬೇಕು. ಜತೆಗೆ ಮುಂದಿನ ಗುರಿ ಏನೆಂಬುದನ್ನು ಆಯ್ಕೆ ಮಾಡಿಕೊಂಡು ಅದರ ಈಡೇರಿಕೆಗಾಗಿ ಇಂದಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದರು.
ಕಿರಿಯರಾದ ನೀವು ಹಿರಿಯರ ಜತೆ ಸಂಬಂಧವನ್ನು ಚೆನ್ನಾಗಿಯೇ ಇಟ್ಟುಕೊಳ್ಳಬೇಕು. ನೀವು ದೊಡ್ಡವರ ಸಹವಾಸದಲ್ಲಿದ್ದರೆ ಮುಂದೆ ನೀವು ಕೂಡ ದೊಡ್ಡವರಾಗಿ ಬೆಳೆಯಬಹುದು. ಪ್ರಕೃತಿಯ ಜತೆ ಉತ್ತಮ ಬಾಂಧವ್ಯ ಹೊಂದಿರಬೇಕು. ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ ಗುರಿಯೆಡೆಗೆ ಸಾಗಬೇಕು ಎಂದು ಮಾರ್ಗದರ್ಶನ ನೀಡಿದರು.
ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಅಶ್ವತ್ಥ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ವಿಯಾಗಲು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಗುರಿ ಹೊಂದಿರಬೇಕು, ಬೇಗ ಏಳುವುದನ್ನು ಕಲಿಯಬೇಕು, ಸ್ವ ಬೆಳವಣಿಗೆಯ ಬಗ್ಗೆ ಯೋಚನೆ, ಸಮಯಪಾಲನೆ ಮತ್ತು ಪ್ರಕೃತಿಗೆ ವಿರುದ್ಧವಾಗಿ ಬದುಕನ್ನು ನಡೆಸದೇ ಪೂರಕವಾಗಿರಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ಸಮಯದ ಪರಿಪಾಲನೆ ಗುರಿಯಾಗಿರಬೇಕು. ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡಬಾರದು. ಉತ್ತಮ ಸ್ನೇಹಿತರನ್ನು ಹೊಂದುವುದು ಕೂಡ ಯಶಸ್ವಿ ಜೀವನಕ್ಕೆ ದಾರಿಯಾಗುತ್ತದೆ ಎಂದರು.
ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪಿ.ವಿಶ್ವನಾಥ್ ಮಾತನಾಡಿ, ವಿದ್ಯಾರ್ಥಿಗಳು ಹಿರಿಯರ ಮಾರ್ಗದರ್ಶನ ಪಾಲಿಸಿದರೆ ಮುಂದೆ ಉತ್ತಮ ಅಧಿಕಾರಿಗಳಾಗಬಹುದು. ಮೊಬೈಲ್ ಗೀಳು ಬಿಟ್ಟು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು, ಕ್ರೀಡೆಯಲ್ಲಿ ಸಾಧನೆ ಮಾಡಿದವರು ಪುರಸ್ಕರಿಸಲಾಯಿತು. ಅಲ್ಲದೇ ರಿಯಾಲಿಟಿ ಷೋ ಕಾರ್ಯಕ್ರಮದ ವಿಜೇತೆ ಪ್ರಿಯಾಂಕ ಆಚಾರ್ ಅವರನ್ನು ಸನ್ಮಾನಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಾನ್ವಿತ ವಿದ್ಯಾಾರ್ಥಿಗಳಿಗೆ ಕಾಲೇಜಿನಿಂದ ಆರ್ಥಿಕ ಸಹಾಯ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಎಸ್.ಮರೀಗೌಡ, ಪ್ರಾಧ್ಯಾಪಕರಾದ ಡಾ.ಪಿ.ಕೆ.ಗೋವರ್ಧನ್, ಜೆ.ಮಂಜು, ಎಸ್.ಲಾವಣ್ಯ, ಟಿ.ಎಂ.ಮಾದೇಶ್‌ಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net