ಬಡತನ ನೆಪದಲ್ಲಿ ಮಕ್ಕಳನ್ನು ಕೆಲಸಕ್ಕೆ ಕಳಿಸದಿರಿ

Published on

ಮುದಗಲ್: ಹೋಟೆಲ್, ಗ್ಯಾರೇಜ್, ವ್ಯವಸಾಯ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಬಾಲಕಾರ್ಮಿಕರನ್ನು ಬಳಕೆ ಮಾಡಿಕೊಂಡಲ್ಲಿ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಜೆಎಂಎಫ್‌ಸಿ ಪ್ರಧಾನ ನ್ಯಾಯಾಧೀಶ ಅಂಬಣ್ಣ ಕೆ. ಹೇಳಿದರು.

ಪಟ್ಟಣದಲ್ಲಿ ಹುಸೇನಿ ಆಲಂ ಕಟ್ಟಡ ಕಾರ್ಮಿಕ ಸಂಘ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕತೆ ನಿರ್ಮೂಲನೆ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಡತನದಿಂದ ಕುಟುಂಬಗಳ ನಿರ್ವಹಣೆಗಾಗಿ ಮಕ್ಕಳನ್ನು ಕೆಲಸಕ್ಕೆ ಕಳಿಸದೇ ಸುಶಿಕ್ಷಿತರನ್ನಾಗಿಸಬೇಕು. ಮಕ್ಕಳನ್ನು ಶಾಲೆಯಿಂದ ದೂರ ಉಳಿಸದೇ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆ ಎಡಿ ರವೀಂದ್ರ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಆಗಾಗ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಬಾಲಕಾರ್ಮಿಕರು ಕಂಡು ಬಂದಲ್ಲಿ ಅವರನ್ನು ಬಾಲ ಮಂದಿರಕ್ಕೆ ಕಳಿಸಿ ಅಲ್ಲಿಂದ ವಸತಿ ಶಾಲೆಗಳಿಗೆ ಸೇರಿಸುವ ಮೂಲಕ ಕಡ್ಡಾಯ ಶಿಕ್ಷಣ ಕೊಡಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ.

ಸಂಪೂರ್ಣ ನಿರ್ಮೂಲನೆಗೆ ಜನರ ಸಹಕಾರವೂ ಅಗತ್ಯವಿದೆ ಎಂದರು. ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಕುರಿತು ವಕೀಲ ಗಿರೀಶ ಜೋಶಿ, ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕತೆ ನಿರ್ಮೂಲನೆ ಕುರಿತು ಮಂಜುನಾಥ ರಡ್ಡಿ ಉಪನ್ಯಾಸ ನೀಡಿದರು. ವಕೀಲರಾದ ವಿಶ್ವನಾಥ ಕರಡಕಲ್, ಮೋಹಿನ್ ಪಟೇಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net