ಮತವನ್ನು ಯಾರೂ ಮಾರಾಟ ಮಾಡದಿರಿ

mysore
Published on

ಮೈಸೂರು: ಮತದಾನ ಪ್ರಜಾಪ್ರಭುತ್ವವನ್ನು ಬಲಪಡಿಸಲು ಇರುವ ಜನತೆಯ ಶಕ್ತಿಯಾಗಿದ್ದು, ಮತದಾರರು ಆಮಿಷಕ್ಕೆ ಒಳಗಾಗಬಾರದು ಎಂದು ವಿಶ್ವಮೈತ್ರಿ ಬುದ್ಧ ವಿಹಾರದ ಡಾ. ಕಲ್ಯಾಣಸಿರಿ ಭಂತೇಜಿ ಹೇಳಿದರು.


ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಪುರಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಗುರುವಾರ ಆಯೋಜಿಸಿದ್ದ ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾನ ಮತಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವ ವ್ಯಕ್ತಿಗಳನ್ನು ಗುರುತಿಸಿ ಮತದಾನ ಮಾಡಬೇಕು ಎಂದರು.


ಅಂಬೇಡ್ಕರ್ ಅವರು ಒಂದು ಮತ, ಒಂದು ಮೌಲ್ಯ ತತ್ವದಡಿ ದೇಶದ ಎಲ್ಲ ವಯಸ್ಕರಿಗೂ ಮತದಾನ ಹಕ್ಕನ್ನು ದೊರಕಿಸಿಕೊಟ್ಟಿದ್ದಾರೆ. ಯಾವುದೇ ಜಾತಿ, ಧರ್ಮ, ಲಿಂಗ, ಭಾಷೆ, ಪಂಗಡ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡಿಲ್ಲ. ಈ ಮತವನ್ನು ಯಾರೂ ಮಾರಾಟ ಮಾಡಿಕೊಳ್ಳಬಾರದು ಎಂದರು.


ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕಿ ಪ್ರೊ.ಎನ್.ಕೆ.ಲೋಲಾಕ್ಷಿ ಮಾತನಾಡಿ, ಅಂಬೇಡ್ಕರ್ ಅವರು ಮತದಾನದ ಹಕ್ಕನ್ನು ಸಾಂವಿಧಾನಿಕವಾಗಿ ದೊರಕಿಸಿಕೊಟ್ಟಿದ್ದಾರೆ. ಮತದಾನವನ್ನು ಹಕ್ಕಾಗಿ ಪ್ರತಿಪಾದಿಸುವ ಮಾದರಿಯಲ್ಲೇ ಕರ್ತವ್ಯವಾಗಿಯೂ ಎಚ್ಚರಿಕೆಯಿಂದ ಚಲಾವಣೆ ಮಾಡಬೇಕು. ವಿದ್ಯಾವಂತರು ಮತ್ತು ತಿಳಿದವರು ಪ್ರಜಾಪ್ರಭುತ್ವ ಮತ್ತು ಮತದಾನದ ಬಗ್ಗೆ ಭಾಷಣ ಮಾಡುತ್ತಾರೆ. ಅಷ್ಟೇ ಉತ್ಸಾಹದಿಂದ ಮತದಾನವನ್ನು ಮಾಡುವ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಶಕ್ತಿ ತುಂಬಬೇಕು ಎಂದು ತಿಳಿಸಿದರು.


ಯಾವುದೇ ಜಾತಿ, ಧರ್ಮ, ಉಡುಗೊರೆ ಇತ್ಯಾದಿಗಳ ಮೋಹಕ್ಕೆ ಸಿಲುಕದೆ ಅರ್ಹರಿಗೆ ಮತ ನೀಡಿದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯ ವೃದ್ಧಿಯಾಗಲಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಸೌಂದರ್ಯವೇ ಮತದಾನ ಎಂದರು.


ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ವಕೀಲ ಎಸ್.ಉಮೇಶ್, ಮೈಸೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಕೆ.ಸಿ. ನಾಗರಾಜು, ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಂಗಸ್ವಾಮಿ ಕಾಳಿಹುಂಡಿ, ಉಪಾಧ್ಯಕ್ಷ ಡಾ.ಮಂಜು ಟಿ. ಸತ್ತಿಗೆಹುಂಡಿ, ಖಜಾಂಚಿ ಡಾ.ಬಿ.ಶಿವಶಂಕರ್, ಜಿಲ್ಲಾ ಸಂಯೋಜಕ ಡಾ.ಚಂದ್ರಗುಪ್ತ, ಮುಖಂಡರಾದ ಡಾ.ಬಿ.ಮೂರ್ತಿ, ಡಾ.ಟಿ.ಎಂ.ಪವಿತ್ರಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net