ವರ್ತಕರ ಪರವಾನಗಿ ರದ್ದುಪಡಿಸಬೇಡಿ

kcci shettar
Published on

ಹುಬ್ಬಳ್ಳಿ: ಕಾರಣಾಂತರದಿಂದ ವ್ಯಾಪಾರ-ವಹಿವಾಟು ನಡೆಸಲು ಸಾಧ್ಯವಾಗದಿರುವ ಎಪಿಎಂಸಿ ವರ್ತಕರ ಪರವಾನಗಿ ರದ್ದುಪಡಿಸಬಾರದು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಗ್ರಹಿಸಿದೆ.

ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಈ ಕುರಿತು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಲೈಸೆನ್ಸ್ ಪಡೆದುಕೊಂಡು ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ-ವಹಿವಾಟು ನಡೆಸುತ್ತಿರುವ ವರ್ತಕರು ಕರೊನಾದಿಂದ ಸಾಕಷ್ಟು ತೊಂದರೆಗೀಡಾಗಿದ್ದಾರೆ. ಹವಾಮಾನ ವೈಪರೀತ್ಯದಿಂದ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳ ಆವಕ ಸಮರ್ಪಕವಾಗಿ ಆಗದೇ ಕೆಲವು ವರ್ತಕರು ವ್ಯಾಪಾರ-ವಹಿವಾಟು ನಡೆಸದೇ ಇರುತ್ತಾರೆ ಎಂದು ವಿವರಿಸಿದೆ.

ಇತ್ತೀಚಿಗೆ ರಾಜ್ಯ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಮಾರುಕಟ್ಟೆ ಪ್ರಾಂಗಣದ ಒಳಗೆ ವ್ಯಾಪಾರ-ವಹಿವಾಟು ನಡೆಸುವ ವರ್ತಕರಿಗೆ ಸೆಸ್ ಆಕರಣೆ ಮಾಡುತ್ತಿರುವುದು, ಪ್ರಾಂಗಣದ ಹೊರಗೆ ವ್ಯಾಪಾರ-ವಹಿವಾಟು ನಡೆಸುವವರಿಗೆ ಯಾವುದೆ ಶುಲ್ಕ ಆಕರಣೆ ಮಾಡದೆ ಇರುವುದು ಕೂಡಾ ವರ್ತಕರ ಮೇಲೆ ತೀವ್ರ ಪರಿಣಾಮ ಬೀರಿದೆ. ಇವೆಲ್ಲ ಕಾರಣದಿಂದಾಗಿ ಕೆಲ ವರ್ತಕರು ವ್ಯಾಪಾರ-ವಹಿವಾಟನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಮಿತಿಯು ವಹಿವಾಟು ನಡೆಸದೆ ಇರುವ ವರ್ತಕರ ಲೈಸೆನ್ಸ್ ಏಕೆ ರದ್ದು ಪಡಿಸಬಾರದೆಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವುದು ಸಮಂಜಸವಲ್ಲ ಎಂದು ಹೇಳಿದೆ.

ನೋಟಿಸ್ ಹಿಂಪಡೆದು ಪುನಃ ವಹಿವಾಟು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದೆ.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಬಳಿಗಾರ, ಸಹ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಸಿಂಘಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net