ಅಂಕಗಳಿಕೆಗೆ ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕಬೇಡಿ

mdg 1 (11)
Published on

ಮೂಡಿಗೆರೆ: ಶಿಕ್ಷಣ ಪಡೆಯುವ ವೇಳೆ ವಿದ್ಯಾರ್ಥಿಗಳನ್ನು ಪಾಲಕರು ಹೆಚ್ಚು ಅಂಕ ಪಡೆಯುವಂತೆ ಒತ್ತಡ ಹಾಕಬಾರದು. ಕೇವಲ ಅಂಕ ಪಡೆಯುವ ಸಲುವಾಗಿ ಶಿಕ್ಷಣ ಪಡೆಯುವುದು ವ್ಯರ್ಥ ಎಂದು ಟೈಲರ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಅಧ್ಯಕ್ಷ ಶಿವೇಗೌಡ ಹೇಳಿದರು.

ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿ ಉನ್ನತ ವ್ಯಾಸಂಗ ಮಾಡುತ್ತಿರುವ ಟೈಲರ್ ವೃತ್ತಿ ಬಾಂಧವರ ಮಕ್ಕಳಿಗೆ ನಗರ ಟೈಲರ್ ಸಮಿತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕಲಿಕಾ ಸಮಯದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸಂಘ, ಸಂಸ್ಥೆಗಳು ಪ್ರೋತ್ಸಾಹಿಸಬೇಕು. ಪಾಲಕರು ಕೂಡ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದರು.

ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯಕ. ಶಿಕ್ಷಣ ಪಡೆಯದ ಅನಕ್ಷರಸ್ಥರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಶಿಕ್ಷಣ ಪಡೆದ ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣದ ಕಡೆ ಚಿಂತನೆ ನಡೆಸಬೇಕು. ಪಾಲಕರು ಕೂಡ ವಿದ್ಯಾರ್ಥಿಗಳ ಮುಂದಿನ ಜೀವನದ ಕಡೆ ಹೆಚ್ಚಿನ ಒಲವು ತೋರಿದಾಗ ಅತ್ಯುತ್ತಮ ಉದ್ಯೋಗ ಪಡೆಯಲು ಸಾಧ್ಯ. ವಿದ್ಯಾರ್ಥಿಗಳಾದ ಅಪೇಕ್ಷಾ, ನವ್ಯ, ರಚನಾ ಅವರನ್ನು ಗೌರವಿಸಲಾಯಿತು. ಟೈಲರ್ ಸಮಿತಿ ನಗರ ಘಟಕದ ಅಧ್ಯಕ್ಷೆ ಉಮಾ ಶಂಕರ್, ಉಪಾಧ್ಯಕ್ಷ ಮಂಜು, ಕಾರ್ಯದರ್ಶಿ ಮೋಹನ್, ಮಂಜುಳಾ, ಗೌರವಾಧ್ಯಕ್ಷ ಷಣ್ಮುಖನಂದ, ಗೋಪಾಲ್, ನರಸಿಂಹ, ಗಿರೀಶ್, ಕೃಷ್ಟಚಾರ್ಯ, ಸತೀಶ್, ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net