ಬಡವರ ಜೀವದ ಜತೆ ಆಟವಾಡಬೇಡಿ

Hebbar Meeting
Published on

ಮುಂಡಗೋಡ: ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸದೆ ನಿರ್ಲಕ್ಷ್ಯ ಧೋರಣೆ ಮುಂದುವರಿಸಿ ಬಡವರ ಜೀವದ ಜತೆ ಆಟವಾಡಿದರೆ ಮುಂದಿನ ದಿನಗಳಲ್ಲಿ ವೈದ್ಯರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದು ಕೊಂಡ ಘಟನೆ ಶನಿವಾರ ಜರುಗಿತು.

ಇತ್ತೀಚೆಗೆ ಹಾವು ಕಚ್ಚಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ಅಂಗನವಾಡಿ ಬಾಲಕಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರಿ ಸಾವಿಗೆ ಕಾರಣವಾದ ಹಿನ್ನಲೆಯಲ್ಲಿ ವಿಶೇಷ ಸಭೆ ನಡೆಸಿ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ನಿಮ್ಮ ಮಕ್ಕಳಿಗೇ ಹಾವು ಕಚ್ಚಿದರೆ ಚಿಕಿತ್ಸೆ ನೀಡಲು ಹೀಗೆ ನಿರ್ಲಕ್ಷ್ಯ ವಹಿಸುತ್ತಿರಾ. ಸರ್ಕಾರ ವೇತನ ಕೊಟ್ಟು ನಿಮ್ಮನ್ನು ಬಡವರ ಸೇವೆಗೆ ನೇಮಿಸಿಕೊಂಡಿದೆ. ಜೀವ ತೆಗೆಯಲು ಅಲ್ಲ ಎಂದು ಆಕ್ರೋಶ ಹೊರಹಾಕಿದರು.

ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಭರತ್ ಕರ್ತವ್ಯ ನಿರ್ವಹಿಸಲು ಸಮರ್ಪಕವಾಗಿಲ್ಲ ಅವರನ್ನು ಮೂರು ದಿನಗಳಲ್ಲಿ ಬೇರಡೆ ವರ್ಗಾಯಿಸುವಂತೆ ಡಿಎಚ್​ಒ ಅವರಿಗೆ ಶಾಸಕ ಶಿವರಾಮ ಹೆಬ್ಬಾರ ಸೂಚನೆ ನೀಡಿದರು.

ಈ ಆಸ್ಪತ್ರೆಯಿಂದ ಪ್ರತಿ ತಿಂಗಳು 110ಕ್ಕೂ ಹೆಚ್ಚು ರೋಗಿಗಳನ್ನು ಹುಬ್ಬಳ್ಳಿ ಕಿಮ್್ಸ ಆಸ್ಪತ್ರೆಗೆ ಕಳುಹಿಸುತ್ತಿರಿ. ನಿಮ್ಮಿಂದ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಅಂದರೆ ನಿಮ್ಮನ್ನೇಕೆ ಇಲ್ಲಿ ಇಟ್ಟುಕೊಳ್ಳಬೇಕು ರಾತ್ರಿವೇಳೆ ವೈದ್ಯರು ಸರಿಯಾಗಿ ಆಸ್ಪತ್ರೆಯಲ್ಲಿ ಇರುವುದಿಲ್ಲ ಎಂಬ ಆರೋಪವಿದೆ. ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ನೀವು ಕರ್ತವ್ಯ ನಿರ್ಲಕ್ಷ್ಯ ವಹಿಸುತ್ತಿದ್ದೀರಿ ಎಂದರು.

ಈ ಅವಘಡಕ್ಕೆ ಕಾರಣವಾದವರ ಮೇಲೆ ಪೊಲೀಸ್ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಸಿಪಿಐ ರಂಗನಾಥ್​ಗೆ ಶಾಸಕ ಶಿವರಾಮ ಹೆಬ್ಬಾರ ಸೂಚನೆ ನೀಡಿದರು.

ವೈದ್ಯರಿಂದ ವರದಿ ಕೇಳಿದ್ದು ವರದಿ ಬಂದ ತಕ್ಷಣವೆ ದೂರು ದಾಖಲಿಸಲಾಗುವುದು ಎಂದು ಸಿಪಿಐ ತಿಳಿಸಿದರು. ವೈದ್ಯೆ ದೀಪಾ ತಂತ್ರಿ ರಾಜಿನಾಮೆ ನೀಡಿದ್ದಾರೆ ಒಂದು ಜೀವ ಹೋದ ನಂತರ ರಾಜಿನಾಮೆ ನೀಡಿದರೆ ಅದು ಪರಿಹಾರವಲ್ಲ ತಪ್ಪಿತಸ್ಥರಿಗೆ ಶಿಕ್ಷೆ ಯಾಗಲೇಬೇಕು ಎಂದರು.

ಈ ವೇಳೆ ತಹಸೀಲ್ದಾರ್ ಶಂಕರ ಗೌಡಿ, ಡಿಎಚ್​ಒ ಡಾ.ನಿರಂಜನ್, ಡಾ.ನರೇಂದ್ರ ಪವಾರ, ಸಿಪಿಐ.ರಂಗನಾಥ ನೀಲಮ್ಮನವರ್, ತಾಪಂ ಮುಖ್ಯಾಧಿಕಾರಿ ಟಿ.ವೈ. ದಾಸನಕೊಪ್ಪ, ಸಿಡಿಪಿಒ ರಾಮು ಬೈಲ್​ಸೀಮೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net