

ನರಗುಂದ: ಅಂಗವಿಕಲರಿಗೆ ಅನುಕಂಪ ತೋರಿಸುವುದರ ಬದಲಾಗಿ ಅವರಿಗೆ ಗೌರಪೂರ್ವಕ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಉತ್ತಮ ವಾತಾವರಣದಿಂದ ಅಂಗವಿಕಲರು ಎಲ್ಲ ರಂಗಗಳಲ್ಲಿಯೂ ಸಾಧನೆ ಮಾಡಬಲ್ಲರು ಎಂದು ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ, ತಾಪಂ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಭಾನುವಾರ ವೈದ್ಯಕೀಯ ತಪಾಸಣೆಗೆ ಒಳಗಾದ ತಾಲೂಕಿನ ಅಂಗವಿಕಲ ಮಕ್ಕಳಿಗೆ ವಿವಿಧ ಸಾಧನ, ಸಲಕರಣೆಗಳ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಗವಿಕಲ ಮಕ್ಕಳಿಗೆ ಸಾಧನೆ, ಸಲಕರಣೆ ನೀಡುವುದರ ಜತೆಗೆ ಅವರ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವನಾಗಿದ್ದಾಗ ಅಂಗವಿಕಲ ಮಕ್ಕಳು ಎಂಬುದರ ಬದಲು ವಿಕಲಚೇತನ ಮಕ್ಕಳೆಂದು ಕರೆಯುವಂತೆ ಆದೇಶಿಸಿದ್ದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರಾಜ್ಯದ ಎಲ್ಲ ಬಡ ಕುಟುಂಬದವರ ಮಕ್ಕಳ ಆರೋಗ್ಯ ಚಿಕಿತ್ಸೆಗೆ ಬಾಲಸಂಜೀವಿನಿ ಮಹತ್ವದ ಯೋಜನೆ ಪ್ರಾರಂಭಿಸಿ, ಪ್ರತಿ ಮಗುವಿಗೆ 35 ಸಾವಿರ ರೂ. ವರೆಗೆ ಉಚಿತ ಚಿಕಿತ್ಸಾ ನೀಡಲಾಗುತ್ತಿದೆ. ಇದಕ್ಕಾಗಿ ಸರ್ಕಾರದಿಂದ 6 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು ಎಂದರು.
ಪುರುಷರಂತೆ ಮಹಿಳೆಯರು ಪ್ರತಿಯೊಂದು ರಂಗಗಳಲ್ಲಿ ಬೆಳೆಯುತ್ತಿರುವಂತೆ ಅಂಗವಿಕಲರ ಬೆಳವಣಿಗೆಗೂ ಸಮಾಜದಲ್ಲಿ ಮುಕ್ತ ಅವಕಾಶವನ್ನು ಕಲ್ಪಿಸಿ, ನೆಮ್ಮದಿಯ ವಾತಾವರಣ ನಿರ್ಮಿಸಿಕೊಡಬೇಕು. ಓಲಂಪಿಕ್‌ನಲ್ಲಿ ಭಾಗವಹಿಸಿದ್ದ ಭಾರತದ 111 ಅಂಗವಿಕಲರು ಪದಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಅಂಗವಿಕಲ ಮಕ್ಕಳಿಗೆ ಬೋಧನೆ ಜತೆಗೆ ಸಾಮಾಜಿಕ ಕಳಕಳಿ ಮೈಗೂಡಿಸಿಕೊಂಡು ಅಗತ್ಯ ಸೌಲಭ್ಯ ಕಲ್ಪಿಸುವುದಾದರೆ ಶಿಕ್ಷಣ ಇಲಾಖೆಗೆ ನಿರಂತರ ಸಹಾಯ ಮಾಡುವುದಾಗಿ ಸಿ.ಸಿ. ಪಾಟೀಲ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಅನುದಾನದಡಿ ತಾಲೂಕಿನ ಅಂಗವಿಕಲ ಮಕ್ಕಳಿಗೆ ವಿವಿಧ ಸಲಕರಣೆಗಳನ್ನು ವಿತರಿಸುತ್ತಿವೆ. ಶಾರೀರಿಕ ಸ್ವಾಸ್ಥ್ಯ ಹೊಂದಲು ಸರ್ಕಾರ ಅಂಗವಿಕಲರಿಗೆ ವಿವಿಧ ಸಲಕರಣೆಗಳನ್ನು ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತವಾಡ, ಸದಸ್ಯ ಚಂದ್ರಗೌಡ ಪಾಟೀಲ, ವಾಸು ಜೋಗಣ್ಣವರ, ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ, ಮಲ್ಲಪ್ಪ ಪೂಜಾರ, ಸತೀಶಗೌಡ ಪಾಟೀಲ, ಪ್ರಕಾಶ ಪಟ್ಟಣಶೆಟ್ಟಿ, ನಾಗರಾಜ ನೆಗಳೂರ, ಮಂಜು ಮೆಣಸಗಿ, ಸಂತೋಷ ಹಂಚಿನಾಳ, ಉಮೇಶ ಯಳ್ಳೂರ, ಶಿಕ್ಷಕ ಎಂ.ಬಿ. ಪಾಟೀಲ, ವಿಜಯ ಮಾಳಗಿ, ಸಿ.ಎಂ. ಕೊಳ್ಳಿಯವರ, ಎಸ್.ಎಂ. ಭೂಸರಡ್ಡಿ, ಬಿ.ಎಸ್. ಖಾನಣ್ಣವರ, ಗಂಗಾಧರ ಬಿ., ಬಿ.ಆರ್. ಪಟ್ಟಣಶೆಟ್ಟಿ, ಉಪಸ್ಥಿತರಿದ್ದರು.