ಏಲಕ್ಕಿ ಮಾರಾಟ ಸಹಕಾರ ಸಂಘದ ಅಪಪ್ರಚಾರಕ್ಕೆ ಕಿವಿಗೊಡಬೇಡಿ

Z SOODHANA S IRAPPA
Published on

ಮಡಿಕೇರಿ: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಸೋಮವಾರಪೇಟೆ ಶಾಖೆಯ ಕುರಿತು ಸಂಘದ ಮಾಜಿ ಅಧ್ಯಕ್ಷರು ಅಪಪ್ರಚಾರದಲ್ಲಿ ತೊಡಗಿದ್ದು, ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದು ಸಂಘದ ಅಧ್ಯಕ್ಷ ಸೂದನ ಈರಪ್ಪ ಮನವಿ ಮಾಡಿದರು.


೩೫ ವರ್ಷಗಳ ಹಿಂದೆ ಏಲಕ್ಕಿ ಬೆಳಗೆಗಾರರ ಅನುಕೂಲಕ್ಕಾಗಿ ಸೋಮವಾರಪೇಟೆಯಲ್ಲಿ ಶಾಖೆ ಆರಂಭಗೊಂಡಿದೆ. ಕಳೆದ ೭ ವರ್ಷಗಳಿಂದ ಸಂಘವು ನಷ್ಟದಲ್ಲೇ ಮುಂದುವರಿಯುತ್ತಿದೆ. ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲೇ ನಷ್ಟದಿಂದ ಹೊರಬರಬಹುದಿತ್ತು. ಆದರೆ, ತಮ್ಮ ಅಧಿಕಾರಾವಧಿಯಲ್ಲಿ ನಷ್ಟ ಉಂಟಾಗಿರುವ ಪರಿಣಾಮ ಮಾಜಿ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ಆರೋಪಿಸುತ್ತಿದ್ದಾರೆ. ಸಂಘದಲ್ಲಿ ಉತ್ಪನ್ನಗಳ ಬೆಲೆ ಹೆಚ್ಚಿದ್ದು, ವ್ಯವಹಾರ ಮಾಡದಂತೆ ಅಪಪ್ರಚಾರ ಮಾಡುತ್ತಿದ್ದಾರೆ. ನಷ್ಟ ಉಂಟಾಗಲು ಮಾಜಿ ಅಧ್ಯಕ್ಷರ ಕೈವಾಡವೂ ಇದೆ ಎಂದಿರುವ ಅವರು, ಸದ್ಯ ಉತ್ತಮ ವ್ಯಾಪಾರ ನಡೆಯುತ್ತಿದ್ದು, ಮಳಿಗೆ ಬಾಡಿಗೆಯಿಂದ ನಷ್ಟ ಸಂಭವಿಸುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸಂಘದ ಕಳೆದ ಮಹಾಸಭೆಯಲ್ಲಿ ನಷ್ಟದ ಬಗ್ಗೆ ಚರ್ಚೆ ನಡೆದಿದ್ದು, ನಷ್ಟದಿಂದ ಹೊರಬರಲು ಸೂಕ್ತ ನಿರ್ಧಾರಕ್ಕಾಗಿ ಆಡಳಿತ ಮಂಡಳಿಯವರಿಗೆ ಅಧಿಕಾರ ನೀಡಲಾಗಿದೆ. ಸದ್ಯದಲ್ಲೇ ಸೋಮವಾರಪೇಟೆ ತಾಲೂಕು ಸಂಘದ ಸದಸ್ಯರ ಸಭೆ ಕರೆದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಬಿ.ಸಿ.ಚೆನ್ನಪ್ಪ, ಅಜ್ಜಿನಂಡ ಗೋಪಾಲಕೃಷ್ಣ, ಪೇರಿಯನ ಉದಯ್ ಕುಮಾರ್, ಅಂಬೆಕಲ್ ಸುಶೀಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಂ.ತಮ್ಮಯ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net