

ಮೈಸೂರು: ಸ್ಪರ್ಧಾತ್ಮಕ ಯುಗದಲ್ಲಿ ಒಂದು ಪರೀಕ್ಷೆಯಲ್ಲಿ ವಿಫಲರಾದರೆ ಧೃತಿಗೆಡಬಾರದು. ಅದನ್ನು ಅನುಭವವಾಗಿ ಪರಿಗಣಿಸಿ ಸಫಲರಾಗುವತ್ತ ನಿರಂತರ ಶ್ರಮಹಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಉಪಕಾರ್ಯದರ್ಶಿಯೂ ಆದ ಆರ್ಥಿಕ ಸಲಹೆಗಾರ ಡಾ. ಸೋಮನಾಥ ಪಾಟ್ನೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಕಾವೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೆಎಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ 50 ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆ ಮಾಡುವುದರಿಂದ ಸ್ಪರ್ಧೆ ಹೆಚ್ಚಾಗಿದೆ. ಹಾಗಾಗಿ ಕೆಲವರಿಗೆ ಕಷ್ಟ ಎನಿಸಬಹುದು. ಆದರೆ ನೀವುಗಳು ಸ್ವತಃ ಸ್ಫೂರ್ತಿ ಮತ್ತು ಭರವಸೆಯೊಂದಿಗೆ ಪರೀಕ್ಷೆಗೆ ತಯಾರಾದಲ್ಲಿ ಸಫಲರಾಗುವುದು ಸುಲಭ ಎಂದರು.
ಶಿಸ್ತು, ಸಂಯಮ, ಕ್ರಮಬದ್ಧ ಅಧ್ಯಯನದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಹಲವು ಸಿದ್ಧತೆಗಳನ್ನು ಬಹಳ ಶ್ರದ್ಧೆಯಿಂದ ತಯಾರಿ ಮಾಡಿಕೊಳ್ಳಬೇಕು. ತರಬೇತಿಯ ಉಪಯೋಗ ಪಡೆದು ತಲ್ಲೀನತೆಯಿಂದ ಯಶಸ್ವಿಯಾಗುವೆಡೆಗೆ ಗಮನ ಹರಿಸಬೇಕು. ಗ್ರಾಮಾಂತರ ಭಾಗದವರಿಗೆ ತರಬೇತಿ ತುಂಬಾ ಉಪಯುಕ್ತವಾಗಿದೆ. ದಿನಪತ್ರಿಕೆ ಓದುವ ಕಲೆ ಕರಗತ ಮಾಡಿಕೊಳ್ಳಬೇಕು ಹಾಗೂ ಸಮಾಜದ ಕೆಳಸ್ತರದವರಿಗೆ ಸಹಾಯ ಮಾಡಬೇಕೆಂಬ ಭಾವನೆ ಬೆಳೆಸಿಕೊಂಡರೆ ಸಾಧಿಸಲು ಮನೋಸ್ಥೈರ್ಯ ದೃಢವಾಗಲಿದೆ ಎಂದು ತಿಳಿಸಿದರು.
ನವ ಮಾಧ್ಯಮ ಬಳಸಿ:
ಸ್ವರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಅಂತರ್ಜಾಲ, ನವ ಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತ ಉದ್ಯೋಗದ ಜತೆ ಶಿಕ್ಷಣ ಪಡೆಯಲು ಪ್ರಯತ್ನಿಸಿ. ಇದಕ್ಕಾಗಿ ಕರಾಮುವಿವಿ ನಿಮಗೆಲ್ಲರಿಗೂ ಒಂದು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಅದನ್ನು ಸದುಪಯೋಗಪಡಿಸಿಕೊಂಡು ಯಶಸ್ಸಾಗುವಂತೆ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಆಡಳಿತ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕಿ ವಿ. ಪ್ರಿಯದರ್ಶಿನಿ ಅವರು ಪರೀಕ್ಷಾ ಸಿದ್ದತೆ ಕುರಿತು ಮಾತನಾಡಿ, ಓದುವ ಸಂದರ್ಭದಲ್ಲಿ ಮನರಂಜನೆ ಪಡುವುದಕ್ಕಿಂತ, ಪರಿಶ್ರಮದಿಂದ ಓದಿ ಸಫಲರಾಗಿ ಮುಂದೆ ಜೀವನ ಪರ್ಯಂತ ಮನರಂಜನೆ ಪಡೆಯಬಹುದು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ ಹಲಸೆ ಮಾತನಾಡಿ, ಪ್ರತಿ ವಿದ್ಯಾರ್ಥಿಯು ತನ್ನ ಅಧ್ಯಯನವನ್ನು ಶ್ರದ್ಧೆಯಿಂದ,ಯೋಜನೆ ಹಾಕಿಕೊಂಡು ಪುಟ ಪುಟ ಓದುವುದರೊಂದಿಗೆ ಪುಸ್ತಕವನ್ನು ಅಧ್ಯಯನ ಮಾಡುವಂತೆ ಇದೆಲ್ಲದರ ಸದುಪಯೋಗ ಪಡೆದುಕೊಳ್ಳಬೇಕು. ಆಗ ನಿಮ್ಮ ಜೀವನ ಸಾರ್ಥಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ನೈಪುಣ್ಯತೆ ಸಾಧಿಸಿ: ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಮಾತನಾಡಿ, ಪ್ರಸ್ತುತತೆ ಹಾಗೂ ನಾವೀನ್ಯತೆ ರೂಢಿಸಿಕೊಂಡು, ಸತತ ಅಭ್ಯಾಸದೊಂದಿಗೆ ನೈಪುಣ್ಯತೆ ಸಾಧಿಸಿದರೆ ಯಶಸ್ಸು ಹತ್ತಿರವಾಗುತ್ತದೆ ಎಂದರು.
ಪರೀಕ್ಷಾಂಗ ಕುಲಸಚಿವ ಡಾ. ಎಚ್.ವಿಶ್ವನಾಥ್, ಡೀನ್ ಪ್ರೊ.ಲಕ್ಷ್ಮೀ, ಮಾತನಾಡಿದರು. ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕ ಡಾ.ಎಚ್. ಬೀರಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ. ಕೊಪ್ಪಲ್ ಇತರರು ಇದ್ದರು.