ಋತುಬಂಧಕ್ಕೆ ಧೃತಿಗೆಡದಿರಿ

IMG20241019130616.jpg
Published on

ಬೆಳಗಾವಿ: ರಜೋನಿವೃತ್ತಿ (ಋತುಬಂಧ) ಸಾಮಾನ್ಯವಾಗಿ ಪ್ರತಿ ಸ್ತ್ರೀಯಲ್ಲಿ ಬರುತ್ತದೆ. ಈ ಸಮಯದಲ್ಲಿ ಸೀಯರಲ್ಲಿ ಆಗಬಹುದಾದ ಬದಲಾವಣೆಗೆ ಧೃತಿಗೆಡದೇ ವೈದ್ಯರಿಗೆ ತೋರಿಸಿದರೆ ಸಮಸ್ಯೆಗಳಿಗೆ ಸಮಾಧಾನ ದೊರೆಯಲಿದೆ ಎಂದು ಯುಎಸ್‌ಎಂ ಕೆಎಲ್‌ಇ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ ಹೇಳಿದರು.

ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗ ಹಾಗೂ ಇನ್ನರ್‌ವ್ಹೀಲ್ ಕ್ಲಬ್ ಆಫ್ ಬೆಳಗಾವಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾಗತಿಕ ರಜೋನಿವೃತ್ತಿ (ಋತುಬಂಧ) ದಿನಾಚರಣೆ ನಿಮಿತ್ತ ಆಸ್ಪತ್ರೆಯಲ್ಲಿ ರಜೋನಿವೃತ್ತಿ ಚಿಕಿತ್ಸಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ. ಎಸ್.ಸಿ. ಧಾರವಾಡ ಮಾತನಾಡಿ, ರಜೋನಿವೃತ್ತಿ ಸಾಮಾನ್ಯವಾಗಿ 45ರಿಂದ 50 ವಯಸ್ಸಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಈ ವಯಸ್ಸಿಗೆ ಮೊದಲೇ ಈ ಸಮಸ್ಯೆ ತಲೆದೋರುತ್ತಿದೆ. ಅದರಲ್ಲಿ ಧೂಮಪಾನ ಮಾಡುವವರಲ್ಲಿ, ರೇಡಿಯೋಥೇರಫಿಗೆ ಒಳಗಾಗಿರುವವರಲ್ಲಿ, ಮಾನಸಿಕ ಖಿನ್ನತೆಗೊಳಗಾಗಿರುವವರಲ್ಲಿ ಈ ಸಮಸ್ಯೆ ಕಾಣುತ್ತಿದೆ. ವೈದ್ಯರಿಗೆ ತೋರಿಸಿ ಪರಿಹಾರೋಪಾಯ ಕಂಡುಕೊಳ್ಳಬಹುದು ಎಂದರು.

ಇಂತಹ ರೋಗಿಗಳಿಗೆ ಅನುಕೂಲವಾಗಲೆಂದೆ ನಮ್ಮ ಆಸ್ಪತ್ರೆಯ ಸ್ತ್ರೀರೋಗ ಪ್ರಸೂತಿ ವಿಭಾಗದಲ್ಲಿ ರಜೋನಿವೃತ್ತಿ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲಾಗಿದೆ. ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಬೆಳಗಾವಿ ಮೆನೊಪಾಸ್ ಸೊಸೈಟಿ ಅಧ್ಯಕ್ಷೆ ಡಾ.ವನಿತಾ ಮೆಟಗುಡ ಮಾತನಾಡಿ, ಸೊಸೈಟಿಯ ಎಲ್ಲ ವೈದ್ಯರು ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿ, ರಜೋನಿವೃತ್ತಿಯ ಬಗ್ಗೆ ನಾಗರಿಕರಲ್ಲಿನ ದ್ವಂದ್ವಗಳಿಗೆ ಪರಿಹಾರೋಪಾಯಗಳನ್ನು ಸೂಚಿಸಬೇಕು ಎಂದರು.

ಇನ್ನರ್‌ವ್ಹೀಲ್ ಕ್ಲಬ್ ಆಫ್ ಬೆಳಗಾವಿ ಅಧ್ಯಕ್ಷೆ ಮೇಧಾ ಶಾಹ ಮಾತನಾಡಿ, ಇನ್ನರ್‌ವ್ಹೀಲ್ ಕ್ಲಬ್ ಪ್ರಾರಂಭದಿಂದಲೂ ಮಹಿಳಾ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು. ಡಾ.ಗೀತಾಂಜಲಿ ತೋಟಗಿ, ಡಾ. ಪ್ರಿಯಾಂಕಾ ಕತ್ತಿ ನಿರೂಪಿಸಿದರು. ಡಾ.ಸತೀಶ ಧಾಮಣಕರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net