

ಗಂಗಾವತಿ: ಕರೊನಾ ಗುಣಮುಖವಾಗುವ ರೋಗವಾಗಿದ್ದು, ಜಾಗೃತಿಯಿಂದ ಚಿಕಿತ್ಸೆ ಪಡೆದಾಗ ಸಾವನ್ನು ದೂರ ಮಾಡಲು ಸಾಧ್ಯ ಎಂದು ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಪಂಪಾನಗರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕರೊನಾ ಮುಕ್ತ ಕೊಪ್ಪಳ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ನಿರ್ಲಕ್ಷ್ಯದಿಂದ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಜಿಲ್ಲೆಯ ಗಂಗಾವತಿಯಲ್ಲಿ ಮಿತಿ ಮೀರುತ್ತಿದೆ. ರೋಗ ಲಕ್ಷಣ ಕಂಡು ಬಂದಾಗ ಕೂಡಲೇ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿದ್ದು, ಪ್ರತಿಯೊಬ್ಬರು ಪರೀಕ್ಷೆಗೆ ಮುಂದಾಗಬೇಕು. ಸ್ಯಾನಿಟರೈಸ್ ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಪರಸ್ಪರ ಅಂತರ ಕಾಪಾಡುವಂತೆ ಸಲಹೆ ನೀಡಿದರು.
ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ರೋಗದ ಬಗ್ಗೆ ಯಾವುದೆ ಭಯ ಬೇಡ. ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಿದರೆ ಸೋಂಕಿನಿಂದ ದೂರ ಉಳಿಯಲು ಸಾಧ್ಯ. ಸೂಕ್ತ ಚಿಕಿತ್ಸೆಯಿಂದ ಸೋಂಕಿನಿಂದ ಗುಣಮುಖರಾಗಲು ಸಾಧ್ಯ ಎಂದರು. ವಾರ್ಡ್ ವ್ಯಾಪ್ತಿಯಲ್ಲಿ ಸಂಚರಿಸಿದ ಅಭಿಯಾನ ಪ್ರತಿಯೊಬ್ಬರ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಮತ್ತು ಪರಸ್ಪರ ಅಂತರ ಕಾಪಾಡುವಂತೆ ಜನರಲ್ಲಿ ಮನವಿ ಮಾಡಲಾಯಿತು.
ಡಿಸಿ ಸುರಳ್ಕರ್ ವಿಕಾಸ ಕಿಶೋರ, ಡಿಎಚ್‌ಒ ಡಾ.ಲಿಂಗರಾಜ್, ಕ್ಷಯ ರೋಗ ನಿರ್ಮೂಲನೆ ಅಧಿಕಾರಿ ಡಾ. ಜಿ.ಮಹೇಶ,ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಸಿದ್ಧರಾಮ, ತಹಸೀಲ್ದಾರ್ ಆರ್.ಕವಿತಾ, ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ನಗರ ಪಿಐ ವೆಂಕಟಸ್ವಾಮಿ, ಪೌರಾಯುಕ್ತ ಶೇಖರಪ್ಪ ಈಳಿಗೇರ್, ಸಿಡಿಪಿಒ ಗಂಗಪ್ಪ, ತಾಪಂ ಇಒ ಡಾ.ಮೋಹನ್, ಉಪವಿಭಾಗ ಆಸ್ಪತ್ರೆ ಡಾ.ಈಶ್ವರ ಸವಡಿ, ನಗರಸಭೆ ಸದಸ್ಯ ವಾಸುದೇವ ನವಲಿ ಇತರರಿದ್ದರು. ನಂತರ 3ನೇ ವಾರ್ಡ್ ಜಯನಗರ, 25ನೇ ವಾರ್ಡ್ ಮುರಹರಿ ನಗರದಲ್ಲೂ ಅಭಿಯಾನ ನಡೆಸಿದ ಜಿಲ್ಲಾಡಳಿತದ ತಂಡ ಕರೊನಾ ಸೋಂಕು ಬಗ್ಗೆ ಜಾಗೃತಿ ಮೂಡಿಸಿತು.