

ಹುಬ್ಬಳ್ಳಿ: ಪ್ರತಿಯೊಬ್ಬರೂ ವಯಸ್ಸು, ಲಿಂಗ ಅಥವಾ ವರ್ಗ ಲೆಕ್ಕಿಸದೆ ಆಧ್ಯಾತ್ಮಿಕ ಪ್ರವಚನಗಳಿಗೆ ಹಾಜರಾಗಲು ಮುಕ್ತರಾಗಿದ್ದಾರೆ. ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ದೈವಿಕ ಕೇಂದ್ರಿತ ಆಲೋಚನೆಗಳು ಮತ್ತು ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ ಎಂದು ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಅಗಡಿ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಹಾಗೂ ಗಂಗಿ ಮಾಳವ್ವ ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಿರುವ ಆಧ್ಯಾತ್ಮಿಕ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಜ್ಞಾನದ ಬೆಳಕಿನಲ್ಲಿ ಅನುರಾಗ, ಪ್ರೀತಿ ಉಳ್ಳವರು ಬದುಕಿರುವ ದೇಶವೇ ಭಾರತ. ಸಂತರು, ಶರಣರ ಜ್ಞಾನದ ಆತ್ಮಜ್ಞಾನದ ಉಪದೇಶಾಮೃತ ಕೇಳುತ್ತ, ಹೇಳುತ್ತ ಬಾಳಿದವರೇ ಭಾರತೀಯರು. ಈ ಪ್ರಪಂಚದಲ್ಲಿರುವ ಅನ್ನ, ನೀರು, ಗಾಳಿ, ಬೆಳಕು ಎಲ್ಲವೂ ಆ ಮಹಾದೇವನ ಪ್ರಸಾದವೆಂದು ಭಾವಿಸಿ ಸದಾ ಪ್ರಸನ್ನತೆಯಿಂದ ಬದುಕಿದವರು ಭಾರತೀಯರು. ದೇವನು ಕರುಣಿಸಿರುವ ಈ ಭವ್ಯ ದಿವ್ಯ ಬದುಕನ್ನು ಪುರಸ್ಕರಿಸಬೇಕೇ ವಿನಃ ತಿರಸ್ಕರಿಸಬಾರದು. ಏಕಾದರೂ ನಾವು ಲೋಕಕ್ಕೆ ಬಂದೇವು ಎಂದು ಬೇಸರಿಸಬಾರದು. ಜಗದ್ವಂದ್ಯರೂ ಭಗವದ್ರೂಪಿಗಳೂ ಆಗಿದ್ದ ಋಷಿ-ಮುನಿಗಳು, ಸಂತರು-ಶರಣರು ಬದುಕಿದ ಪವಿತ್ರ ಭೂಮಿಯಲ್ಲಿ ಬದುಕುವ ಸೌಭಾಗ್ಯ ನಮ್ಮದಾಗಿದೆ ಎಂದರು.
ಭಾರತ ಅಧ್ಯಾತ್ಮಿಕ ದೇಶ ಅಂತ ಕರೆಯಲ್ಪಡುತ್ತದೆ. ಉತ್ತರ ಭಾರತದಲ್ಲಿ ಕುಂಭಮೇಳ ನಡೆಯುತ್ತಿದೆ. ಎಲ್ಲ ದೇಶಗಳು ಭಾರತ ದೇಶದತ್ತ ನೋಡುತ್ತಿವೆ ಎಂದರು.
ಶ್ರೀ ದಾನಯ್ಯ ದೇವರು, ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ಆರ್.ಎಫ್. ಪಾಟೀಲ, ಚನ್ನಮ್ಮ ಚಿಕ್ಕಮಠ, ಚನ್ನಯ್ಯ ಹಿರೇಮಠ, ಶಂಕರಗೌಡ ಹಿತ್ತಲಮನಿ, ಪರಮೇಶ್ವರಗೌಡ ಹೊಸಮನಿ, ಸದಾಶಿವಯ್ಯ ಹಿರೇಮಠ, ಮಲ್ಲಪ್ಪ ಸಂಗಣ್ಣವರ, ಗ್ರಾಮದ ಭಕ್ತರು ಇದ್ದರು.