ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಕೀಳರಿಮೆ ಬೇಡ

kdr 1 (1)
Published on

ಕಡೂರು: ಶ್ರಮಿಕ ವರ್ಗದ ಕುಟುಂಬಗಳಿಗೆ ಆರೋಗ್ಯ ಸುಧಾರಣೆಗೆ ನಮ್ಮ ಕ್ಲಿನಿಕ್ ಘಟಕಗಳು ಹೆಚ್ಚು ವರದಾನವಾಗಲಿವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಸುಭಾಷ್ ನಗರದಲ್ಲಿ ಆರೋಗ್ಯ ಇಲಾಖೆಯಿಂದ ಸ್ಥಾಪಿರುವ ನಮ್ಮ ಕ್ಲಿನಿಕ್ ಘಟಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಆರೋಗ್ಯದ ಹಿತರಕ್ಷಣೆಗಾಗಿ ಹಲವಾರು ಸವಲತ್ತುಗಳನ್ನು ಒದಗಿಸುತ್ತಿದ್ದು ಇದರ ಸದುಪಯೋಗ ಕಾರ್ಯವಾಗಬೇಕಿದೆ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಜನರು ಕೀಳರಿಮೆ ಮಾಡಿಕೊಳ್ಳಬಾರದು. ಖಾಸಗಿ ಆಸ್ಪತ್ರೆಗಳಿಗಿಂತ ಹೆಚ್ಚಿನ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭಿಸಲಿದೆ ಎಂದರು.

ತಾಲೂಕು ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ 800 ರಿಂದ 1000 ಜನ ಹೊರರೋಗಿಗಳು ಬರುತ್ತಾರೆ. ಇದರಿಂದ ತಾಲೂಕು ಆಸ್ಪತ್ರೆಯಲ್ಲಿ ಜನ ದಟ್ಟಣೆಜಾಸ್ತಿಯಾಗುತ್ತಿದೆ. ಆದ್ದರಿಂದ ಉಳಿದ ಸರ್ಕಾರಿ ಆಸ್ಪತ್ರೆಗಳನ್ನು ಸಬಲೀಕರಣ ಮಾಡುವ ಕೆಲಸವಾಗುತ್ತಿದೆ. ಪಟ್ಟಣದ ಸುಭಾಷ್ ನಗರದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಇಲ್ಲಿ ವೈದ್ಯರು ಸೇರಿದಂತೆ ಐವರು ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಪಟ್ಟಣಕ್ಕೆ ಇನ್ನೂ ಎರಡು ನಮ್ಮ ಕ್ಲಿನಿಕ್‌ಗಳ ಅವಶ್ಯಕತೆ ಇದ್ದು, ಈ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲ ವರ್ಗದವರ ಅನೂಕೂಲಕ್ಕಾಗಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ಈಗಾಗಲೇ ಪಟ್ಟಣ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದೆ. ಮತ್ತಷ್ಟು ಕ್ಲಿನಿಕ್‌ಗಳ ಅವಶ್ಯಕತೆ ಇದ್ದು, ಪುರಸಭೆಯಿಂದ ಸೂಕ್ತ ಜಾಗ ಗುರುತಿಸಿಕೊಡಲಾಗುವುದು ಎಂದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 15ಲಕ್ಷ ವೆಚ್ಚದ ತಾಲೂಕು ಆರೋಗ್ಯಾಧಿಕಾರಿಗಳ ಹೆಚ್ಚುವರಿ ಕಟ್ಟಡವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ತಾಲೂಕು ವೈದ್ಯಾಧಿಕಾರಿ ರವಿಕುಮಾರ್, ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಎಸ್.ವಿ.ದೀಪಕ್, ಪುರಸಭೆ ಸದಸ್ಯರಾದ ಪುಷ್ಪ ಲತಾ ಮಂಜುನಾಥ್, ಮರುಗುದ್ದಿ ಮನು, ಸೈಯಾದ್ ಯಾಸೀನ್, ಜ್ಯೋತಿ ಆನಂದ್, ಗೋವಿಂದರಾಜು, ಸಂದೇಶ್ ಕುಮಾರ್, ಶಶಿಕುಮಾರ್, ನಾಮಿನಿ ಸದಸ್ಯ ಕೃಷ್ಣಪ್ಪ, ಟಿ.ಹನುಮಂತಪ್ಪ, ಜಯಣ್ಣ, ಮಂಜುನಾಥ್, ನಾಗೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net