ನವನಗರ ಬ್ಯಾಂಕ್ ವಿರುದ್ಧದ ಅಪಪ್ರಚಾರಕ್ಕೆ ಕಿವಿಗೊಡದಿರಿ

 ಕೆ.ಆರ್.ನಗರದ ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಅವರಿಗೆ ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಜನ್ಮದಿನದ ಶುಭ ಕೋರಿದರು. ಶಿವುನಾಯಕ್, ಕೆ.ಎಸ್.ಮಹೇಶ್, ಕೆ.ಎಲ್.ಜಗದೀಶ್, ಕೆ.ಪಿ.ಪ್ರಭುಶಂಕರ್, ನಟರಾಜು, ಸಂತೋಷ್‌ಗೌಡ ಇತರರಿದ್ದರು.
ಕೆ.ಆರ್.ನಗರದ ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಅವರಿಗೆ ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಜನ್ಮದಿನದ ಶುಭ ಕೋರಿದರು. ಶಿವುನಾಯಕ್, ಕೆ.ಎಸ್.ಮಹೇಶ್, ಕೆ.ಎಲ್.ಜಗದೀಶ್, ಕೆ.ಪಿ.ಪ್ರಭುಶಂಕರ್, ನಟರಾಜು, ಸಂತೋಷ್‌ಗೌಡ ಇತರರಿದ್ದರು.
Published on

ಕೆ.ಆರ್.ನಗರ: ಉತ್ತಮವಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ವಿವಿಧೆಡೆಗಳಲ್ಲಿ ಶಾಖೆಗಳನ್ನು ತೆರೆದು ಜನಸ್ನೇಹಿಯಾಗಿರುವ ನವನಗರ ಅರ್ಬನ್ ಬ್ಯಾಂಕ್‌ನ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಇಂತಹ ವರ್ತನೆ ಸರಿಯಲ್ಲ ಎಂದು ಹುಣಸೂರು ಶಾಸಕ ಜಿ.ಡಿ.ಹರೀಶ್‌ಗೌಡ ಹೇಳಿದರು.

ಪಟ್ಟಣದ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಆಡಳಿತ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಅವರ 52ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರಿ ಧುರೀಣರೂ ಆಗಿದ್ದ ಮಾಜಿ ಸಚಿವ ದಿ.ಎಸ್.ನಂಜಪ್ಪ ಅವರ ದೂರದೃಷ್ಠಿಯಿಂದ ಆರಂಭಿಸಿದ್ದ ಬ್ಯಾಂಕ್‌ನ ಏಳಿಗೆ ಸಹಿಸದವರು ಮಾಡುತ್ತಿರುವ ಅಪಪ್ರಚಾರಕ್ಕೆ ಯಾರೂ ಕಿವಿಗೊಡಬಾರದು ಎಂದರು.

ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಂದ ಹಿಡಿದು ಎಲ್ಲ ವರ್ಗದವರಿಗೂ ಸಾಲ ನೀಡುವ ಮೂಲಕ ಜನಪರವಾಗಿರುವ ಬ್ಯಾಂಕ್ ಅನ್ನು ಕೆ.ಎನ್.ಬಸಂತ್ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದು, ಇವರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಜತೆಗೆ ಮುಂದಿನ ದಿನಗಳಲ್ಲಿ ಇವರಿಗೆ ಉತ್ತಮ ರಾಜಕೀಯ ಅವಕಾಶ ಮತ್ತು ಅಧಿಕಾರ ದೊರಕಲಿ. ಜನರ ಆಶೀರ್ವಾದದಿಂದ ಉತ್ತುಂಗಕ್ಕೇರಲಿ ಎಂದು ಆಶಿಸಿದರು.

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಗಣನೀಯವಾದ ಕೊಡುಗೆ ನೀಡುವುದರ ಜತೆಗೆ ಪಟ್ಟಣದಲ್ಲಿ ಎರಡು ದಶಕಗಳ ಹಿಂದೆ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಆರಂಭಿಸಿ ಜನರ ಆರ್ಥಿಕಾಭಿವೃದ್ಧಿಗೆ ಕಾರಣರಾಗಿರುವ ಮಾಜಿ ಸಚಿವ ದಿ.ಎಸ್.ನಂಜಪ್ಪ ಅವರ ಕುಟುಂಬ ಮೈ ಚಳಿ ಬಿಟ್ಟು ರಾಜಕೀಯಕ್ಕೆ ಸಂಪೂರ್ಣವಾಗಿ ಬರಬೇಕು ಎಂದು ಸಲಹೆ ನೀಡಿದರು.

ನಿಮ್ಮ ಕುಟುಂಬದ ಜತೆಯೂ ಜನರಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ನೀವು ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರೊಡನೆ ಬೆರೆತು ಗಟ್ಟಿಯಾಗಿ ನಿಂತು ರಾಜಕಾರಣ ಮಾಡದಿದ್ದರೆ ಅದು ಎಸ್.ನಂಜಪ್ಪ ಅವರಿಗೆ ಮಾಡುವ ಅಪಮಾನವಾಗುತ್ತದೆ. ಅಲ್ಲದೆ ರಾಜಕೀಯ ಅಧಿಕಾರ ಯಾರ ಸ್ವತ್ತೂ ಅಲ್ಲ ಅದು ಜನರ ತೀರ್ಮಾನವಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್ ಮಾತನಾಡಿ, ನವ ನಗರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಅವರು ಭವಿಷ್ಯದಲ್ಲಿ ತೆಗೆದುಕೊಳ್ಳುವ ಎಲ್ಲ ರಾಜಕೀಯ ನಿರ್ಧಾರಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ.ಎನ್.ಬಸಂತ್ ಸ್ನೇಹಿತರು ಮತ್ತು ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಜನ್ಮದಿನದ ಶುಭಾಷಯ ಕೋರಿದರು. ಪುರಸಭೆ ಅಧ್ಯಕ್ಷ ಶಿವುನಾಯಕ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭೆ ಸದಸ್ಯರಾದ ಕೆ.ಎಲ್.ಜಗದೀಶ್, ಕೆ.ಪಿ.ಪ್ರಭುಶಂಕರ್, ನಟರಾಜು, ಸಂತೋಷ್‌ಗೌಡ, ಶಂಕರ್‌ಸ್ವಾಮಿ, ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ಮಾಜಿ ಸದಸ್ಯ ಎನ್.ಶಿವಕುಮಾರ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ನವನಗರ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಸಿ.ಸುರೇಶ್, ವ್ಯವಸ್ಥಾಪಕ ಎಂ.ಪಿ.ಸುಹಾಸ್, ಮುಖಂಡರಾದ ದಿಡ್ಡಹಳ್ಳಿ ಬಸವರಾಜು, ಎಚ್.ಎಸ್.ವೇಣುಗೋಪಾಲ್, ಡೇರಿ ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net