

ಗದಗ: ಕರೊನಾ ಸೋಂಕಿಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಲಸಿಕೆ ಕುರಿತ ಊಹಾಪೋಹ ಸುದ್ದಿಗಳಿಗೆ ಕಿವಿಗೊಡದೆ ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಹೇಳಿದರು.
ಜಿಲ್ಲಾಡಳಿತ ಭವ ನದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಕರಣಗಳು ನಿಯಂತ್ರಣದಲ್ಲಿದೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂರ್ಪತರನ್ನು ಪತ್ತೆ ಮಾಡಿ ತಪಾಸಣೆಗೆ ಒಳಪಡಿಸಬೇಕು. ಅಲ್ಲದೆ, ಕರೊನಾ ನಿಯಂತ್ರಣಕ್ಕಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.
ಪ್ರಥಮ ಹಂತದಲ್ಲಿ ಆರೋಗ್ಯ ಇಲಾಖೆ ಸೇರಿ ಕರೊನಾ ಸೇನಾನಿಗಳಿಗೆ ಲಸಿಕೆ ವಿತರಿಸಲಾಗುತ್ತಿದೆ. ದ್ವಿತೀಯ ಹಂತದಲ್ಲಿ ಕಂದಾಯ, ಪಂಚಾಯತ್ರಾಜ್ ಇಲಾಖೆ ನೌಕರರಿಗೆ ಲಸಿಕೆ ನೀಡಲಾಗುವುದು. ಈ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕಳೆದ ಸಾಲಿನಲ್ಲಿ ಪ್ರವಾಹಕ್ಕೊಳಗಾದ ಮನೆಗಳಿಗೆ ಪರಿಹಾರ ವಿತರಣೆ ಕುರಿತಂತೆ ಶೀಘ್ರ ಸೂಕ್ತ ನಿರ್ಣಯ ಕೈಗೊಂಡು ಪರಿಹಾರ ವಿತರಣೆ ಮುಕ್ತಾಯಗೊಳಿಸಬೇಕು. ಮನೆ ಹಾನಿಯಾದವರಿಗೆ ಮನೆ ನಿರ್ವಿುಸದಿದ್ದಲ್ಲಿ ನಿಯಮಾನುಸಾರ ಕ್ರಮ ವಹಿಸಬೇಕು. ಮನೆಗಳಿಗೆ ಜಿಪಿಎಸ್ ಮಾಡುವ ಕಾರ್ಯವನ್ನು ಬೇಗ ಪೂರ್ಣಗೊಳಿಸಬೇಕು ಎಂದರು.
ಜಿಲ್ಲೆಯ ಕೆಲವು ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸರ್ಕಾರದ ಮಾರ್ಗಸೂಚಿಗಳನ್ವಯ ಪರಿಶೀಲಿಸಿ ಪುನಃ ಪ್ರಸ್ತಾವನೆಗಳನ್ನು ಸಲ್ಲಿಸಬೇಕು. ಸಕಾಲ, ಭೂಮಿ ತಂತ್ರಾಂಶಗಳನ್ನು ಸರಿಯಾಗಿ ನಿರ್ವಹಿಸಲು ನಿಪುಣ ವಿಷಯ ನಿರ್ವಾಹಕರನ್ನು ನೇಮಿಸಬೇಕು. ತಾಂತ್ರಿಕ ತೊಂದರೆ ಎದುರಾದಲ್ಲಿ ಜಿಲ್ಲಾಧಿಕಾರಿ ಕಚೇರಿ ತಾಂತ್ರಿಕ ಶಾಖೆ ಸಂರ್ಪಸಿ ಪರಿಹಾರ ಕಂಡುಕೊಳ್ಳುವ ಮೂಲಕ ಸಕಾಲ ಯೋಜನೆಯನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕ ರವಿಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಇತರರಿದ್ದರು.