

ಶಿವಮೊಗ್ಗ: ಕಸ್ತೂರಿರಂಗನ್, ಶರಾವತಿ, ಭದ್ರಾ ಯೋಜನೆಗಳ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ಆಗ್ರಹಿಸಿದರು.
ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಬಿಜೆಪಿ ಗೆಲ್ಲುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ತಂತ್ರಗಾರಿಕೆಯನ್ನು ಕೇಳಬೇಡಿ. ವಿಧಾನಸಭಾ ಚುನಾವಣೆಯಲ್ಲೂ 150 ಸ್ಥಾನ ಗೆಲ್ಲುವುದಾಗಿ ಬಿಜೆಪಿಯವರು ಹೇಳುತ್ತಿದ್ದರು. ಆದರೆ ಗೆದ್ದಿದ್ದು 65 ಮಾತ್ರ ಎಂದು ವ್ಯಂಗ್ಯವಾಡಿದರು.
ಆರ್‌ಜೆಡಿ ಮುಖ್ಯಸ್ಥ ನಿತೀಶ್‌ಕುಮಾರ್ ಎನ್‌ಡಿಎ ಒಕ್ಕೂಟ ಸೇರ್ಪಡೆ ಖಂಡಿತವಾಗಿಯೂ ತಪ್ಪು ಹೆಜ್ಜೆಯಾಗಿದೆ. ಸದ್ಯಕ್ಕೆ ಇಂಡಿಯಾ ಒಕ್ಕೂಟಕ್ಕೆ ಹಿನ್ನಡೆ ಆಗಿರಬಹುದು. ಆದರೆ ಕೇಂದ್ರ ಸರ್ಕಾರದ ವಿರುದ್ಧದ ಹೋರಾಟ ನಿಲ್ಲಿವುದಿಲ್ಲ ಎಂದರು.
ಶಾಮನೂರೇ ಸರಿ ಮಾಡ್ತಾರೆ
ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಸಂಸದ ಬಿ.ವೈ.ರಾಘವೇಂದ್ರ ಪರ ಬ್ಯಾಟಿಂಗ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇದನ್ನು ಶಾಮನೂರು ಅವರೇ ಬಂದು ಸರಿ ಮಾಡುತ್ತಾರೆ. ಈ ಹಿಂದೆ ಎಂ.ಬಿ.ಪಾಟೀಲ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಒಳ್ಳೆಯ ಕೆಲಸ ಮಾಡುತ್ತಾರೆಂದು ಹೊಗಳಿದ್ದರು. ಎಂ.ಪಿ.ಪ್ರಕಾಶ್ ಅವರು ಜೆಡಿಎಸ್‌ನಲ್ಲಿದ್ದ ನನ್ನನ್ನು ಗೆಲ್ಲಿಸಿ ಎಂದಿದ್ದರು. ಈಗ ಸೃಷ್ಟಿಯಾಗಿರುವ ಗೊಂದಲದ ಬಗ್ಗೆ ಶಾಮನೂರು ಅವರೇ ಉತ್ತರ ಕೊಟ್ಟರೆ ಒಳ್ಳೆಯದು ಎಂದು ಹೇಳಿದರು. ಶಿವಮೊಗ್ಗ ರಾಜಕಾರಣಕ್ಕೂ ಅದಕ್ಕೂ ಯಾವುದೇ ಸಂಬಂಧ ಬರುವುದಿಲ್ಲ. ಈ ಹೇಳಿಕೆಯಿಂದ ಶಿವಮೊಗ್ಗ ರಾಜಕಾರಣ ಬದಲಾಗುತ್ತದೆ ಎಂದರೆ ಅದು ಶೇ.100 ತಪ್ಪು ಕಲ್ಪನೆ ಎಂದರು.