ಕನ್ನಡಾಭಿಮಾನ ಭಾಷಣಗಳಿಗೆ ಸೀಮಿತವಾಗದಿರಲಿ

KANNADA
Published on

ದೊಡ್ಡಬಳ್ಳಾಪುರ: ಕನ್ನಡಿಗರ ಕನ್ನಡಾಭಿಮಾನ ಭಾಷಣಗಳಿಗೆ ಸೀಮಿತವಾಗದೆ, ಕನ್ನಡ ಭಾಷೆಯನ್ನು ಎಲ್ಲೆಡೆ ಬಳಸಿದಾಗ ಕನ್ನಡ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತೆ ಜಿ.ಎಸ್.ಸ್ಮಿತಾ ತಿಳಿಸಿದರು.

ನಗರದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಶ್ರೀಮಂತ ಪರಂಪರೆ ಇದೆ. ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ಕೃತಿಗಳು ಬಂದಿವೆ. ಎಂದಿಗೂ ಕನ್ನಡ ಸಾಹಿತ್ಯದ ಓದುಗರು ಕಡಿಮೆಯಾಗಬಾರದು. ಕನ್ನಡ ನಾಡು ಮೊದಲಿನಿಂದಲೂ ಸರ್ವಜನಾಂಗದ ಶಾಂತಿಯ ತೋಟ ಎಂಬ ಕೀರ್ತಿಗೆ ಪಾತ್ರವಾಗಿದೆ. ಬೆಂಗಳೂರು ಇಂದು ದೇಶದ ರಾಜಧಾನಿಯಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿರುವ ಕನ್ನಡಿಗರು ಕನ್ನಡ ಭಾಷೆಯಲ್ಲೇ ಮಾತನಾಡಿದರೆ ಇತರರು ಕನ್ನಡ ಕಲಿಯಲು ಸಾಧ್ಯವಾಗುತ್ತದೆ ಎಂದರು.

ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳು ಈಗ ಕನ್ನಡದಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ. ಕನ್ನಡದಲ್ಲಿ ವ್ಯಾಸಂಗ ಮಾಡಿದವರು ಸಹ ಸ್ಪರ್ಧಾತ್ಮಕ ಪರೀಕ್ಷಗಳಿಗೆ ಸೂಕ್ತ ಸಿದ್ಧತೆ ನಡೆಸಿದರೆ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಮಾಹಿತಿಗಳು ಈಗ ಕನ್ನಡ ಜಾಲತಾಣಗಳಲ್ಲೂ ದೊರೆಯುತ್ತವೆ. ಇವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಕನ್ನಡಿಗರು ಸ್ಥಳೀಯ ಉದ್ಯೋಗಗಳನ್ನು ಪಡೆಯಲು ಕೌಶಲ ಜ್ಞಾನವನ್ನು ಅರಿಯಬೇಕು ಎಂದರು.

ಕನ್ನಡತನ ಉಳಿಸಿ

ಕನ್ನಡ ಭಾಷೆ ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ ಭಾಷೆಯಾಗಿದೆ. ಕನ್ನಡ ಲಿಪಿಯನ್ನು ಲಿಪಿಗಳ ರಾಣಿ ಎಂದು ಕರೆಯಲಾಗಿದೆ. ಕನ್ನಡ ಭಾಷೆಯ ಅನನ್ಯತೆಯನ್ನು ಕನ್ನಡ ಕವಿಗಳು ಹಾಡಿ ಹೊಗಳಿದ್ದಾರೆ. ಹಚ್ಚೇವು ಕನ್ನಡದ ದೀಪ ಗೀತೆಯನ್ನು ಕೇಳದ ಕನ್ನಡಿಗರೇ ಇಲ್ಲ. ಕನ್ನಡತ್ವವನ್ನು ಡಿ.ಎಸ್.ಕರ್ಕಿಯವರು ತಮ್ಮ ಕವಿತೆಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡತನ ಎಂದಿಗೂ ಮರೆಯಾಗಬಾರದು. ಕನ್ನಡತನವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಬೇಕು ಎಂದು ನವೋದಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ ತಿಳಿಸಿದರು.

"ಕನ್ನಡ ಭಾಷೆಯನ್ನು ಎಲ್ಲ ರಂಗದಲ್ಲೂ ಸಶಕ್ತ ಭಾಷೆಯಾಗಿ ಬಳಸಬೇಕಾಗಿದೆ. ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ತಾಂತ್ರಿಕ ಶಿಕ್ಷಣವನ್ನು ಕನ್ನಡ ಭಾಷಾ ಮಾಧ್ಯಮದಲ್ಲಿ ಕಲಿಯುವ ವಾತಾವರಣ ನಿರ್ಮಾಣವಾಗಬೇಕಾಗಿದೆ. ಇದಕ್ಕಾಗಿ ಕನ್ನಡ ಪದಕೋಶವನ್ನು ಕನ್ನಡ ಭಾಷಾ ತಜ್ಞರು ಸಿದ್ಧಗೊಳಿಸಬೇಕು. ರಾಜ್ಯದ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯಲ್ಲಿ ಎಲ್ಲ ವ್ಯವಹಾರಗಳು ನಡೆಯಬೇಕು."

ಪ್ರೊ.ಕೆ.ಆರ್.ರವಿಕಿರಣ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net