ಜೀವನಕ್ಕೆ ತೊಡಕಾಗದಿರಲಿ ದೃಷ್ಟಿಯ ತೊಂದರೆ

SIRSI KANNADAKA
Published on

ಶಿರಸಿ: ಕಣ್ಣು ಪ್ರತಿ ಜೀವಿಯ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ದೃಷ್ಟಿಯ ತೊಂದರೆ ವ್ಯಕ್ತಿಯ ಜೀವನದಲ್ಲಿ ತೊಡಕಾಗಬಾರದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದ ಭಾರತ ಸೇವಾದಳ ಕಚೇರಿಯಲ್ಲಿ ಶನಿವಾರ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಿ ಅವರು ಮಾತನಾಡಿದರು. ಸರ್ಕಾರವು ಆಶಾಕಿರಣ ಯೋಜನೆ ಜಾರಿಗೊಳಿಸಿದ್ದು, ಇದರ ಪ್ರಯೋಜನವನ್ನು ಅಗತ್ಯ ಉಳ್ಳವರು ಪಡೆದುಕೊಳ್ಳಬೇಕು ಎಂದರು.

ಕಣ್ಣಿನ ಆರೋಗ್ಯ ಸೇವೆಗಳ ಲಭ್ಯತೆಯ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆಶಾ ಕಿರಣ ಯೋಜನೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಆರೋಗ್ಯ ಸಿಬಂದಿ, ಆಶಾ ಕಾರ್ಯಕರ್ತೆಯರು ಮನೆ- ಮನೆಗಳಿಗೆ ಭೇಟಿ ನೀಡಿ, ಎಲ್ಲ ವಯೋಮಾನದವರಿಗೆ ಪ್ರಾಥಮಿಕ ಹಂತದ ಕಣ್ಣಿನ ತಪಾಸಣೆ ನಡೆಸಿ, ಈ ವೇಳೆ ಕಣ್ಣಿನ ತೊಂದರೆ ಇದ್ದವರನ್ನು ದ್ವಿತೀಯ ಹಂತದ ತಪಾಸಣೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೇತ್ರ ವೈದ್ಯರು ಪರೀಕ್ಷಿಸಿ ಕನ್ನಡಕಗಳ ಅಗತ್ಯ ಇರುವವರಿಗೆ ಅವರ ದೃಷ್ಟಿ ದೋಷದ ಪ್ರಕಾರ ಕನ್ನಡಕಗಳನ್ನು ಆಶಾಕಿರಣ ಯೋಜನೆಯಡಿ ಉಚಿತವಾಗಿ ವಿತರಿಸಿದ್ದಾರೆ. ಸರ್ಕಾರದ ಇಂಥ ಯೋಜನೆಗಳ ಸದುಪಯೋಗ ಜನರು ಪಡೆಯಬೇಕು. ಸರ್ಕಾರದ ಕಾರ್ಯಕ್ರಮಗಳ ಜನಪರ ಕಾರ್ಯಕ್ರಮ ಆಗಬೇಕಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂದರು.

ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ ಮಾತನಾಡಿ, ಸರ್ಕಾರದಿಂದ ಬಡವರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅರ್ಹರು ಅದರ ಪ್ರಯೋಜನ ಪಡೆದು ಆರ್ಥಿಕವಾಗಿ ಗಟ್ಟಿಯಾಗಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ವಿನಾಯಕ ಭಟ್, ಪಂಡಿತ ಆಸ್ಪತ್ರೆ ವೈದ್ಯಾಧಿಕಾರಿ ಡಾ. ನೇತ್ರಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಭಾರತ ಸೇವಾದಳದ ಕೆ.ಎನ್. ಹೊಸ್ಮನಿ, ಪ್ರದೀಪ ಶೆಟ್ಟಿ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net