

ಶಿವಮೊಗ್ಗ: ಚಲನಚಿತ್ರೋತ್ಸವಗಳು ಕಾಟಾಚಾರಕ್ಕೆ ಎಂಬಂತೆ ಆಗಬಾರದು. ಅರ್ಥಪೂರ್ಣ ಸಿನಿಮಾಗಳನ್ನು ಸಾರ್ವಜನಿಕರು ನೋಡುವಂತಹ ವಾತವರಣವನ್ನು ಸೃಷ್ಟಿಸಬೇಕಿದೆ ಎಂದು ಹಿರಿಯ ನಟಿ, ಎಂಎಲ್‌ಸಿ ಉಮಾಶ್ರೀ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಳ್ಳಿ ಮಂಡಲ, ಚಿತ್ರ ಸಮಾಜದ ಆಶ್ರಯದಲ್ಲಿ ನಾಡಹಬ್ಬ ದಸರಾ 2ನೇ ದಿನ ದಸರಾ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಚಲನಚಿತ್ರೋತ್ಸವದಲ್ಲಿ ಚಿತ್ರಗಳನ್ನು ಬೆಳಗ್ಗೆ 8ಕ್ಕೆ ಪ್ರದರ್ಶಿಸಲಾಗುತ್ತದೆ. ಆದರೆ ಆ ಸಮಯದಲ್ಲಿ ಶ್ರಮಜೀವಿಗಳು, ವಿದ್ಯಾರ್ಥಿಗಳು, ಮಕ್ಕಳು, ಯುವಕರು ಸೇರಿ ಯಾರಿಗೂ ಬಿಡುವು ಇರುವುದಿಲ್ಲ. ಅದು ವೀಕ್ಷಿಸುವ ಸಮಯವೂ ಅಲ್ಲ. ಹಾಗಾಗಿ ಈ ಸಮಯ ಬದಲಾವಣೆ ಮಾಡಬೇಕು ಎಂದರು.
ಪ್ರತಿಯೊಬ್ಬರೂ ಒಳ್ಳೆಯ ಸಿನಿಮಾಗಳನ್ನು ನೋಡುವಂತೆ ಆದಾಗ ಮಾತ್ರ ಚಲನಚಿತ್ರೋತ್ಸವಗಳು ಯಶಸ್ವಿಯಾಗುತ್ತವೆ. ಇಲ್ಲವಾದರೆ ಇದು ಕಾಟಾಚಾರಕ್ಕೆ ಪ್ರದರ್ಶನಗೊಳುತ್ತದೆ ಅಷ್ಟೇ. ಜಿಲ್ಲಾಡಳಿತ ಅಥವಾ ಮಹಾನಗರ ಪಾಲಿಕೆಯಾಗಲಿ, ಚಿತ್ರಮಂದಿರದ ಮಾಲೀಕರ ಜತೆ ಮಾತನಾಡಿ ಸಮಯ ಬದಲಾವಣೆ ಮಾಡಿ ಶ್ರಮಜೀವಿಗಳು ಸಿನಿಮಾಗಳನ್ನು ನೋಡುವಂತೆ ಮಾಡಬೇಕು ಎಂದು ತಿಳಿಸಿದರು.
ಕನ್ನಡದ ಸಿನಿಮಾಗಳು ಉಳಿಯಬೇಕು. ಇದರಿಂದ ಕಲಾವಿದರೂ ಉಳಿಯುತ್ತಾರೆ. ಇಂತಹ ವಾತಾವರಣ ನಿರ್ಮಿಸಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಇಂದಿನ ಸಿನಿಮಾಗಳು ಎಲ್ಲರನ್ನೂ ತಲುಪುವಂತಾಗಬೇಕು. ಅದರಲ್ಲೂ ಮಕ್ಕಳ ಸಿನಿಮಾಗಳು ಹೆಚ್ಚಾಗಿ ಬರಬೇಕಾಗಿದೆ. ಅಂತಹ ಸಿನಿಮಾಗಳಿಂದ ಮಕ್ಕಳು ಪ್ರಭಾವಿತರಾಗಬೇಕು ಎಂದರು.
ರಂಗಭೂಮಿ ಕಲಾವಿದ ಅವಿನಾಶ್ ಶಠಮರ್ಷಣ್, ಶಾಖಾಹಾರಿ ನಿರ್ದೇಶಕ ಸಂದೀಪ್ ಸುಂಕದ್, ನಿರ್ಮಾಪಕ ರಾಜೇಶ್ ಕೀಳಂಬಿ, ಡಾ. ಎಚ್.ಎಸ್.ನಾಗಭೂಷಣ್, ಬೆಳ್ಳಿಮಂಡಲ ಸಂಚಾಲಕ ಎಚ್.ಯು.ವೈದ್ಯನಾಥ್, ಚಲನಚಿತ್ರ ಸಾಹಿತಿ ಡಾ. ವಿ.ನಾಗೇಂದ್ರಪ್ರಸಾದ್, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ತಹಸೀಲ್ದಾರ್ ಬಿ.ಎನ್.ಗಿರೀಶ್ ಉಪಸ್ಥಿತರಿದ್ದರು.
12ರಿಂದ 4ಕ್ಕೆ ಇಳಿಕೆ: ಕಲೆಗೆ ಶಕ್ತಿ ಸಿಗುವಂತಹ ಕಾರ್ಯ ದಸರಾ ಚಲನಚಿತ್ರೋತ್ಸವಗಳಿಂದ ನಡೆಯುತ್ತಿದೆ. ಸಿನಿಮಾಗಳು ಕಲಾವಿದರ ಜಗತ್ತು. ಅವು ಉಳಿದರೆ ಮಾತ್ರ ಕಲಾವಿದರು ಉಳಿಯುತ್ತಾರೆ. ಶಿವಮೊಗ್ಗದಲ್ಲಿ ಒಟ್ಟು 12 ಚಿತ್ರಮಂದಿರಗಳಿದ್ದವು. ಆದರೆ ಇಂದು ಉಳಿದಿರುವುದು 4 ಮಾತ್ರ. ಸಿನಿಮಾಗಳಿಗೆ ಶಕ್ತಿ ಸಿಗದೇ ಹೋದರೆ ಅನೇಕ ಚಿತ್ರಮಂದಿರಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ನಿಮ್ಮದು 5, ನಮ್ಮದು 35 ವರ್ಷ
ನಿಮ್ಮದು ಐದು ವರ್ಷ, ನಮ್ಮದು 35 ವರ್ಷ ಅಧಿಕಾರ. ನಿಮಗೆ ಜನರು ಭಿಕ್ಷೆ ಕೊಟ್ಟಿದ್ದಾರೆ. ನಮಗೆ ನಾವೇ ಪಡೆದುಕೊಂಡಿದ್ದೇವೆ. ಇದು ಭೀಮ ಸಿನಿಮಾದ ಇನ್‌ಸ್ಪೆಕ್ಟರ್ ಗಿರಿಜಾ ಪಾತ್ರಧಾರಿ, ರಂಗಭೂಮಿ ಕಲಾವಿದೆ ಪ್ರಿಯಾ ಶಠಮರ್ಷಣ್ ಅವರಿಂದ ಹೊರಬಿದ್ದ ಡೈಲಾಗ್. ಅಂಬೇಡ್ಕರ್ ಭವನದಲ್ಲಿ ಮಾತನಾಡಿದ ಅವರು ಕಾಲೇಜು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ನಾನು ಶಿವಮೊಗ್ಗದ ಸೊಸೆ. ಶಿವಮೊಗ್ಗ ನನಗೆ ಸಾಕಷ್ಟು ವಿಶೇಷವಾಗಿದೆ ಎಂದರು.