ಭಾಷೆ ಸಾಧನೆಗೆ ತೊಡಕಾಗದಿರಲಿ

 ಹುಣಸೂರು ನಗರದ ಸರ್ಕಾರಿ ಆದರ್ಶ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಫ್ರೆಷರ್ಸ್‌ ಡೇ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಿಡಿಸಿ ಉಪಾಧ್ಯಕ್ಷ ಶಿವಕುಮಾರ್.ವಿ.ರಾವ್, ತಂಗಮರಿಯಪ್ಪನ್, ನಟರಾಜ್ ರಾಮೇನಹಳ್ಳಿ, ಶಶಿಕಲಾ ಬಸವಲಿಂಗಯ್ಯ, ಪ್ರಾಂಶುಪಾಲ ಸೋಮಣ್ಣ ಇತರರಿದ್ದಾರೆ.
ಹುಣಸೂರು ನಗರದ ಸರ್ಕಾರಿ ಆದರ್ಶ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಫ್ರೆಷರ್ಸ್‌ ಡೇ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಿಡಿಸಿ ಉಪಾಧ್ಯಕ್ಷ ಶಿವಕುಮಾರ್.ವಿ.ರಾವ್, ತಂಗಮರಿಯಪ್ಪನ್, ನಟರಾಜ್ ರಾಮೇನಹಳ್ಳಿ, ಶಶಿಕಲಾ ಬಸವಲಿಂಗಯ್ಯ, ಪ್ರಾಂಶುಪಾಲ ಸೋಮಣ್ಣ ಇತರರಿದ್ದಾರೆ.
Published on

ಹುಣಸೂರು: ವಿದ್ಯಾರ್ಥಿಗಳು ತಮ್ಮ ಹದಿಹರೆಯದ ವಯಸ್ಸಿನ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡಲ್ಲಿ ಸಾಧನೆಯ ಶಿಖರವೇರಲು ಸಾಧ್ಯ ಎಂದು ಮಾರೀಸ್ ಸ್ಪಿನ್ನರ್ಸ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸರ್ಕಾರಿ ಆದರ್ಶ ಪದವಿಪೂರ್ವ ಕಾಲೇಜು ಅಬಿವೃದ್ಧಿ ಸಮಿತಿ ಸದಸ್ಯ ತಂಗಮರಿಯಪ್ಪನ್ ಅಭಿಪ್ರಾಯಪಟ್ಟರು.

ನಗರದ ಚಿಕ್ಕಹುಣಸೂರಿನ ಸರ್ಕಾರಿ ಆದರ್ಶ ಪದವಿಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಫ್ರೆಷರ್ಸ್‌ ಡೇ(ಸ್ವಾಗತ ದಿನ) ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಅಪರಿಮಿತ ಶಕ್ತಿ ಇರುತ್ತದೆ. ಏನನ್ನಾದರೂ ಸಾಧಿಸುವ ಛಲ ಇರುತ್ತದೆ. ಆದರೆ ನಿಮ್ಮ ಶಕ್ತಿ, ಆತ್ಮವಿಶ್ವಾಸ ಜೀವನದ ಸಕಾರಾತ್ಮಕ ಬೆಳವಣಿಗೆಗೆ ಬಳಕೆಯಾಗಬೇಕಿದೆ. ಮನಸು ಚಂಚಲವಾಗಿರುವ ಈ ಕಾಲಘಟ್ಟದಲ್ಲಿ ನಿಮ್ಮಲ್ಲಿ ನೀವು ಆಶಾಭಾವನೆ ಬೆಳೆಸಿಕೊಳ್ಳಿ. ಆಂಗ್ಲಭಾಷೆಯಾಗಲೀ, ಇತರ ಭಾಷೆಗಳಾಗಲೀ ನಿಮ್ಮ ಸಾಧನೆಗೆ ತೊಡಕಾಗಬಾರದು. ಪ್ರತಿದಿನ ಯಾವುದೇ ಭಾಷೆಯ ಪೇಪರ್, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಆಗ ನಿಮ್ಮಲ್ಲಿ ಆಗುವ ಬದಲಾವಣೆ ನಿಮಗೇ ಆಶ್ಚರ್ಯವನ್ನು ಉಂಟುಮಾಡಬಲ್ಲದು ಎಂದು ಸಲಹೆ ನೀಡಿದರು.

ಸಿಡಿಸಿ ಉಪಾಧ್ಯಕ್ಷ ಶಿವಕುಮಾರ್.ವಿ.ರಾವ್ ಮಾತನಾಡಿ, 2010ರಲ್ಲಿ ಆದರ್ಶ ವಿದ್ಯಾಸಂಸ್ಥೆ ಆರಂಭಗೊಂಡಿದ್ದರೂ ಇದೀಗ 2025-26ನೇ ಸಾಲಿನಲ್ಲಿ ಕಾಲೇಜು ಹಂತ ಆರಂಭಗೊಂಡಿದೆ. ತಮ್ಮ ಅಧಿಕಾರಾವಧಿಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಶಾಸಕ ಜಿ.ಡಿ.ಹರೀಶ್‌ಗೌಡ ಆದರ್ಶ ಪದವಿ ಪೂರ್ವ ಕಾಲೇಜಿನ ಸರ್ವತೋಮುಖ ಅಬಿವೃದ್ಧಿಗೆ ಪಣತೊಟ್ಟಿದ್ದಾರೆ. ಇಲಾಖೆಯಿಂದ ವಿವಿಧ ವಿಷಯಗಳ ಪ್ರಯೋಗಾಲಯಕ್ಕೆ ಅವಶ್ಯ ಸಾಧನ ಸಲಕರಣೆಗಳು ಸ್ಥಾಪಿಸಲಾಗುತ್ತಿದ್ದು, ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆ ಇಲ್ಲದಂತೆ ಕ್ರಮ ವಹಿಸಲಾಗಿದೆ. ವಿದ್ಯಾರ್ಥಿಗಳು ಅತ್ಯುತ್ತಮವಾಗಿ ವ್ಯಾಸಂಗ ಮಾಡುವ ಮೂಲಕ ತಾಲೂಕಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ಸೋಮಣ್ಣ, ಸರ್ಕಾರಿ ಆದರ್ಶ ಕಾಲೇಜಿನ ವಿದ್ಯಾರ್ಥಿಗಳು ಹೆಸರಿಗೆ ತಕ್ಕಂತೆ ಆದರ್ಶಪ್ರಾಯರಾಗಿಯೇ ಸಮಾಜಕ್ಕೆ ಕಾಣಬೇಕು. ನಿಮ್ಮ ಶೈಕ್ಷಣಿಕ ಪ್ರಗತಿಗಾಗಿ ಶಾಸಕರು ಸಿಡಿಸಿ ಸಮಿತಿ ಮತ್ತು ಕಾಲೇಜಿನ ಅಧ್ಯಾಪಕ ವರ್ಗ ಕಟಿಬದ್ಧತೆಯಿಂದ ದುಡಿಯಲಿದೆ ಎಂದರು.

ವಿದ್ಯಾರ್ಥಿಗಳಾದ ಪುಣ್ಯಶ್ರೀ, ಪ್ರಜ್ವಲ್, ಸಂಜನಾ, ಸೃಜನ್, ಪ್ರಿಯಾಂಕಾ ಎರಡು ತಿಂಗಳ ತಮ್ಮ ಅನುಭವಗಳನ್ನು ಹಂಚಿಕೊಂಡರು. ಆದರ್ಶ ಪ್ರೌಢಶಾಲೆ ಮುಖ್ಯಶಿಕ್ಷಕ ಚಂದ್ರಕುಮಾರ್ ಮಾತನಾಡಿದರು.

ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ಎಲ್ಲರ ಮನಗೆದ್ದರು. ಕಾರ್ಯಕ್ರಮದಲ್ಲಿ ಸಿಡಿಸಿ ಸದಸ್ಯರಾದ ನಟರಾಜ್ ರಾಮೇನಹಳ್ಳಿ, ಶಶಿಕಲಾ ಬಸವಲಿಂಗಯ್ಯ, ವೆಂಕಟೇಶ್, ದಿನೇಶ್ ಕುಮಾರ್, ಪ್ರಾಧ್ಯಾಪಕರಾದ ಆರ್.ಕೆ.ದರ್ಶನ್, ಸುನಯನ, ಪಿ.ಪಲ್ಲವಿ, ಅಶ್ವತ್ಥ್ ನಾರಾಯಣ್, ಸಿ.ಎನ್.ಚಿನ್ಮಯಿ, ಮಮತಾ, ಮೋನಿಷಾ, ರಮೇಶ್, ಕೀರ್ತಿಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net