

ಕೊಳ್ಳೇಗಾಲ: ಪಟ್ಟಣದಲ್ಲಿರುವ ಶ್ರೀ ವಾಸವಿ ಕಾಲೇಜಿನಲ್ಲಿ ಸುಮಾರು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಸಮಾಜದ ಉನ್ನತಿಗಾಗಿ ಶಿಕ್ಷಣ ನೀಡಲಾಗುತ್ತಿದೆ. ಹಾಗಾಗಿ, ಶಾಲೆ ಹಾಗೂ ಕಾಲೇಜು ಸ್ಥಳದ ವಿಚಾರದಲ್ಲಿ ಅಡ್ಡಿ ಉಂಟು ಮಾಡಬಾರದು ಎಂದು ಆಗ್ರಹಿಸಿ ಆರ‌್ಯವೈಶ್ಯ ಸಂಘದ ಅಧ್ಯಕ್ಷ ಎ.ಡಿ.ಕುಮಾರಕೃಷ್ಣ ಉಪವಿಭಾಗಾಧಿಕಾರಿ ಬಿ.ಆರ್. ಮಹೇಶ್‌ಗೆ ಮನವಿ ಸಲ್ಲಿಸಿದರು.
ತಾಲೂಕು ಆರ‌್ಯ ವೈಶ್ಯ ಸಂಘಧ ಪದಾಧಿಕಾರಿಗಳ ಜತೆಗೂಡಿ ಉಪವಿಭಾಗಾಧಿಕಾರಿ ಭೇಟಿ ಮಾಡಿದ ಸಂಘದ ಅಧ್ಯಕ್ಷರು ಮನವಿ ಪತ್ರ ನೀಡಿದರು.
ಕಸಬಾ ಹೋಬಳಿಯ ರೆವಿನ್ಯೂ ಗ್ರಾಮದ ಸರ್ವೇ ನಂ.706ಎ 1ರಲ್ಲಿನ 53 ಸೆಂಟ್ ವಿಸ್ತೀರ್ಣ ಭೂಮಿ, ಸರ್ವೇ ನಂ.7032 ರಲ್ಲಿನ 0.11 ಸೆಂಟ್, ಸರ್ವೇ ನಂ 7052 ರಲ್ಲಿನ 0.36 ಸೆಂಟ್, ಸರ್ವೇ ನಂ. 708 ಬಿ 1, ಎ 1ರಲ್ಲಿರುವ 0.16 ಸೆಂಟ್ ಭೂಮಿ ಸೇರಿದಂತೆ ಒಟ್ಟು 1.19 ಎಕರೆ ಭೂಮಿಯನ್ನು ಅಂದಿನ ಮೈಸೂರು ಜಿಲ್ಲಾ ಡೆಪ್ಯುಟಿ ಕಮಿಷನರ್ ಹಾಗೂ ಕೊಳ್ಳೇಗಾಲ ತಹಸೀಲ್ದಾರ್ ಅವರು 1961 ರ ನ.11 ರಂದು ನಮ್ಮ ಸಮಾಜದ ವಿದ್ಯಾರ್ಥಿ ವಸತಿನಿಲಯಕ್ಕಾಗಿ ಮಂಜೂರು ಮಾಡಿಕೊಟ್ಟಿದ್ದಾರೆ. ಇಲ್ಲಿ ವಾಸವಿ ವಿದ್ಯಾ ಕೇಂದ್ರ ನಾಮಾಂಕಿತದೊಡನೆ ಶಾಲೆ ಮತ್ತು ಕಾಲೇಜು ನಿರ್ಮಿಸಿ 40 ವರ್ಷಗಳಿಂದ ನಡೆಸಲಾಗುತ್ತಿದೆ. ಕೊಳ್ಳೇಗಾಲ ನಗರಸಭೆ ಹಾಗೂ ಪುರಸಭೆಯಿಂದ ಕಟ್ಟಡ ಪರವಾನಿಗೆ ಪಡೆದು ಕಟ್ಟಡ ನಿರ್ಮಿಸಲಾಗಿದೆ. ತದನಂತರ ನಗರಸಭೆಯಿಂದ ಇ-ಸ್ವತ್ತನ್ನು ಅಧ್ಯಕ್ಷರ ಹೆಸರಿಗೆ ಮಾಡಿಕೊಡಲಾಗಿದೆ. ಅಂತೆಯೇ ನಗರಸಭೆಯಿಂದಲೂ ದೃಢೀಕರಣ ಪತ್ರ ನೀಡಲಾಗಿದೆ.
ಈ ನಡುವೆ ನಮ್ಮ ಸಂಸ್ಥೆಗೆ ಸೇರಿದ ಆಸ್ತಿಗೆ ಸಂಬಂಧಿಸಿದ ರೆವಿನ್ಯೂ ದಾಖಲಾತಿ ಸೃಷ್ಟಿಸಿ ಶಾಲಾ ಕಟ್ಟಡ ಹಾಗೂ ಶಾಲಾ ಆವರಣವನ್ನು ಅಕ್ರಮವಾಗಿ ಪಡೆದುಕೊಳ್ಳಲು ಸಿದ್ಧವಾಗುತ್ತಿರುವ ಕುರಿತು ಗಮನಕ್ಕೆ ಬಂದಿದೆ. ಸಮಾಜದ ಉನ್ನತಿಗಾಗಿ ಶಿಕ್ಷಣ ನೀಡಲಾಗುತ್ತಿರುವುದರಿಂದ ಯಾವುದೇ ಅಡಿ ಉಂಟು ಮಾಡಬಾರದು ಎಂದು ಮನವಿ ಮಾಡಿದರು. ಬಳಿಕ ಸ್ಥಳ ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದರು.
ಆರ‌್ಯ ವೈಶ್ಯ ಸಂಘದ ಉಪಾಧ್ಯಕ್ಷ ಪಿ.ಎನ್.ಸತ್ಯನಾರಾಯಣ, ಕಾರ್ಯದರ್ಶಿ ಪಿ.ಜಿ.ಶ್ರೀಧರ್, ಸಹ ಕಾರ್ಯದರ್ಶಿ ಪಿ.ಪ್ರವೀಣ್, ಖಂಜಾಚಿ ಶ್ರೀನಿವಾಸ್ ಗುಪ್ತ ಇತರರಿದ್ದರು.