ವಿವಾದಾತ್ಮಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಬೇಡ

14 NRD-2
Published on

ನರಗುಂದ: ಎಲ್ಲ ಹಬ್ಬಗಳಿಗೂ ತನ್ನದೆ ಆದ ವಿಶೇಷತೆ ಹಾಗೂ ವೈಶಿಷ್ಟ್ಯತೆಗಳಿವೆ. ಹಬ್ಬಗಳ ಆಚರಣೆ ಹೆಸರಲ್ಲಿ ಡಿಜೆ ಹಾಕಿ ಕುಣಿಯುವುದು. ಕಾನೂನು ಸುವ್ಯವಸ್ಥೆ, ಸಮಾಜದ ಸ್ವಾಸ್ಥ್ಯ ಹದಗೆಡುವಂತೆ ನಡೆದುಕೊಂಡರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಎಚ್ಚರಿಸಿದರು.

ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಬ್ಬಗಳ ಸಂದರ್ಭದಲ್ಲಿ ಪೊಲೀಸರಿಗೆ ನೆಮ್ಮದಿಯಿಂದ ಮಲಗಲು ಕೂಡ ಸಾಧ್ಯವಾಗುತ್ತಿಲ್ಲ. ಅವರ ಕಷ್ಟ ಕಾರ್ಪಣ್ಯಗಳನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಸೂಕ್ಷ್ಮತೆಯಿಂದ ಗುರುತಿಸಿಕೊಂಡಿರುವ ನರಗುಂದ ತಾಲೂಕಿನ ಯಾವುದೇ ವಿವಾದಾತ್ಮಕ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಬಾರದು. ಅಕಸ್ಮಾತ್ ಏನಾದರೂ ಅಹಿತಕರ ಘಟನೆಗಳು ಜರುಗಿದರೆ ಅದಕ್ಕೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಆಯೋಜಕರನ್ನೇ ಸಂಪೂರ್ಣ ಹೊಣೆಗಾರನ್ನಾಗಿ ಮಾಡಲಾಗುವುದು ಎಂದರು.

ಡಿವೈಎಸ್ಪಿ ಟಿ.ಆರ್. ಪಾಟೀಲ ಮಾತನಾಡಿ, ಹೋರಾಟದ ತವರೂರೆಂದು ಗುರುತಿಸಿಕೊಂಡಿದ್ದ ನರಗುಂದ ತಾಲೂಕಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಪರಿಣಾಮ ಹಬ್ಬಗಳ ಸಂದರ್ಭದಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. 11ನೇ ದಿನದ ಗಣೇಶ ಮೂರ್ತಿ ವಿಸರ್ಜನೆಗೆ ಈದ್-ಮಿಲಾದ್ ಹಬ್ಬದ ಆಚರಣೆ ಇರುತ್ತದೆ. ಈ ವೇಳೆ ಎಲ್ಲರೂ ಪೊಲೀಸ್ ಇಲಾಖೆ ನಿರ್ದೇಶನದಂತೆ ಶಾಂತಿ, ಸೌಹಾರ್ದತೆಯಿಂದ ಹಬ್ಬಗಳ ಆಚರಣೆ ಮಾಡಬೇಕು ಎಂದರು.

ಸಿಪಿಐ ಎಸ್.ವಿ.ಸಿರಗುಪ್ಪಿ, ಪಿಎಸ್‌ಐ ಸವಿತಾ ಮುನ್ನಾಳ ಮಾತನಾಡಿದರು. ಎಎಸ್‌ಐ ಡಿ.ಕೆ. ಹಾಲವರ, ಸಿಕಂದರ ಪಠಾಣ, ಸಂಭಾಜಿ ಕಾಶೀದ, ವೆಂಕಟೇಶ ಸಾಬಳೆ, ದತ್ತು ಜೋಗಣ್ಣವರ, ವಿಜಯ ಚಲವಾದಿ, ಡಿ.ಎಂ. ನಾಯ್ಕರ, ಮುತ್ತು ರಾಯರಡ್ಡಿ, ಕೆ.ಬಿ. ಖಲೀಪ್, ನಜೀರಅಹ್ಮದ್ ಖಾಜಿ, ವಿ.ಕೆ. ಹಿರೇಗೌಡ್ರ, ಯಶವಂತ ನಡುವಿನಮನಿ, ಬಾಬುಸಾಬ ಅತ್ತಾರ, ಎಚ್.ಎನ್. ಗೋಟೂರ, ಪೊಲೀಸ್ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net