

ಹುಬ್ಬಳ್ಳಿ: ನಗರದ ಚನ್ನಮ್ಮ (ಈದ್ಗಾ) ಮೈದಾನದಲ್ಲಿ ಹೈಕೋರ್ಟ್ ಆದೇಶದಂತೆ ಯಾವುದೇ ಧಾರ್ವಿುಕ ಆಚರಣೆಗೆ ಅವಕಾಶ ನೀಡಬಾರದು. ಅಲ್ಲದೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡಬಾರದು. ಹುಬ್ಬಳ್ಳಿ ಶಾಂತತೆಗೆ ಭಂಗ ತರುತ್ತಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರನ್ನು ಕೂಡಲೇ ಬಂಧಿಸಿ, ಗಡಿಪಾರು ಮಾಡಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ವಿಜಯ ಗುಂಟ್ರಾಳ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ದಿವಾಣಿ ನ್ಯಾಯಾಲಯವು ಹುಬ್ಬಳ್ಳಿ ಚನ್ನಮ್ಮ ಮೈದಾನದಲ್ಲಿ ಯಾವುದೇ ಸಾಂಪ್ರದಾಯಿಕ ಹಕ್ಕು ಇರುವುದಿಲ್ಲ ಎಂದು ಆದೇಶ ಮಾಡಿದೆ. ಸುಪ್ರೀಂ ಕೋರ್ಟ್ ಈ ತೀರ್ಪು ಜತೆಗೆ ಡಿಕ್ರಿಯನ್ನೂ ಎತ್ತಿ ಹಿಡಿದಿದೆ. ಇದರನ್ವಯ ಚನ್ನಮ್ಮ ಮೈದಾನದಲ್ಲಿ ವರ್ಷಕ್ಕೆರಡು ಬಾರಿ ಮುಸ್ಲಿಮರಿಗೆ ನಮಾಜ್ ಸಲ್ಲಿಸಲು ಮತ್ತು ಜನವರಿ 26 ಹಾಗೂ ಅಗಸ್ಟ್ 15ರಂದು ರಾಷ್ಟ್ರ ಧ್ವಜಾರೋಹಣ ಮಾಡಲು ಅವಕಾಶ ನೀಡಲಾಗಿದೆ. ಮೈದಾನದಲ್ಲಿ ಯಾವುದೇ ಸಾಂಪ್ರದಾಯಿಕ ಹಕ್ಕುಗಳು ಇರುವುದಿಲ್ಲ ಎಂದು ಹುಬ್ಬಳ್ಳಿಯ ದಿವಾಣಿ ನ್ಯಾಯಾಲಯ ಹಾಗೂ ಹೈಕೋರ್ಟ್ 1992ರ ಜೂನ್18ರಂದು ಆದೇಶ ಮಾಡಿದೆ ಎಂದು ವಿವರಿಸಿದರು.
ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಫೂರ ಅಹ್ಮದ್ ಕುರಟ್ಟಿ, ಜಿಲ್ಲಾಧ್ಯಕ್ಷ ಮುಕ್ತುಂ ಹೊಸಮನಿ, ಜಿಲ್ಲಾ ಸಮಿತಿ ಸದಸ್ಯರಾದ ಮಲೀಕ್ ಕಳಸ, ಹಮೀದ್ಬಂಗಾಲಿ, ಇಮ್ತಿಯಾಜ್ ಬೆಳೆಪಸರ್ ಇತರರು ಇದ್ದರು.