ಏಡ್ಸ್ ಸೋಂಕಿತರನ್ನು ಕಡೆಗಣಿಸಬೇಡಿ

20 TPR-01 Red Ribbon Club Function (1)
Published on

ತಿಪಟೂರು: ಏಡ್ಸ್ ಸೋಂಕಿತರಿಗೆ ತಾರತಮ್ಯ ಮಾಡುವುದು, ದ್ವೇಷ ಹರಡುವುದು ಶಿಕ್ಷಾರ್ಹ ಅಪರಾಧ ಎಂದು ಪ್ರಾಂಶುಪಾಲ ಎಂ.ಡಿ.ಶಿವಕುಮಾರ್ ಹೇಳಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ರೆಡ್ ರಿಬ್ಬನ್ ಕ್ಲಬ್ ಸಮಾರಂಭದ ಆಧ್ಯಕ್ಷತೆ ವಹಿಸಿ ಮಾತನಾಡಿ, ಅಂತಾರಾಷ್ಟ್ರೀಯಮಟ್ಟದಲ್ಲಿ ಏಡ್ಸ್ ನಿಯಂತ್ರಣಕ್ಕೆ ಗಟ್ಟಿ ಕ್ರಮ ಕೈಗೊಂಡ ಪರಿಣಾಮ ಇತ್ತೀಚಿನ ವರದಿ ಪ್ರಕಾರ ಏಡ್ಸ್ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ. ಪ್ರತಿ ವರ್ಷ ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನವಾಗಿ ಆಚರಿಲಾಗುತ್ತದೆ. ಯುವ ಜನತೆ ಏಡ್ಸ್ ಹರಡುವ ಬಗೆ ಅರಿತುಕೊಂಡು ಬೇರೆ ಜನರಲ್ಲಿ ಜಾಗೃತಿ ಮೂಡಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಟಿ.ಎಸ್ ಉಮೇಶ್ ಮಾತನಾಡಿ, ರೆಡ್ ರಿಬ್ಬನ್ ಎಚ್‌ಐವಿ./ಏಡ್ಸ್ ಜಾಗೃತಿಯ ಅಂತಾರಾಷ್ಟ್ರೀಯ ಸಂಕೇತವಾಗಿದ್ದು, ನಾಗರಿಕರಲ್ಲಿ ಜಾಗೃತಿ ಮೂಡಿಸಿ ಎಚ್‌ಐವಿ ಸೋಂಕಿತರ ಸಂಖ್ಯೆಯನ್ನು ಸೊನ್ನೆಗೆ ತರಬೇಕು ಎಂದರು.

ಮಲ್ಲೇಗೌಡ ಮಾತನಾಡಿ, ಕ್ಷಯ ರೋಗದ ಕಾರಣ ಮತ್ತು ಚಿಕಿತ್ಸೆ ಬಗ್ಗೆ ತಿಳಿಸಿ, ಕ್ಷಯಮುಕ್ತ ಭಾರತ ಮಾಡೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ರೆಡ್ ರಿಬ್ಬನ್ ಕ್ಲಬ್ ಕಾರ್ಯದರ್ಶಿ ಮಧುಸೂಧನ್ ಪ್ರಸ್ತಾವಿಕ ಮಾತುಗಳನ್ನಾಡಿದರು. 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೆಡ್ ರಿಬ್ಬನ್ ಕ್ಲಬ್‌ನ ಸದಸ್ಯರಾಗಿ ರೆಡ್ ರಿಬ್ಬನ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net