ಮಾನಸಿಕ ಅಸ್ವಸ್ಥರನ್ನು ಕಡೆಗಣಿಸಬೇಡಿ : ನ್ಯಾಯಾಧೀಶ ಕೆ.ಕೆ.ಅಮರನಾಥ್

12
Published on

ಮೈಸೂರು: ಮಾನಸಿಕವಾಗಿ ಅಸ್ವಸ್ಥರನ್ನು ಕಡೆಗಣಿಸುವುದು ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಕೆ.ಅಮರನಾಥ್ ಹೇಳಿದರು.

ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ)ಯಲ್ಲಿ ಮಂಗಳವಾರ ಸಾಮಾಜಿಕ ಕಾರ್ಯ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಗ್ರೀನ್ ಡಾಟ್ ಟ್ರಸ್ಟ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಎನ್.ಆರ್. ಫೌಂಡೇಶನ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ‘ಸೇವೆಗಳಿಗೆ ಪ್ರವೇಶ - ವಿಪತ್ತುಗಳು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಮಾನಸಿಕ ಆರೋಗ್ಯ’ ಕುರಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಶೇ.15 ರಷ್ಟು ವಯಸ್ಕರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಆದರೆ ಶೇ. 70 ಜನರು ಯಾವುದೇ ರೀತಿಯ ಚಿಕಿತ್ಸೆ ಪಡೆಯುವುದೇ ಇಲ್ಲ. ಅರಿವು ಕೊರತೆ, ಹೀನಾಯತೆ ಮತ್ತು ಗ್ರಾಮೀಣ ಭಾಗಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಅಭಾವ ಇದಕ್ಕೆ ಪ್ರಮುಖ ಕಾರಣ ಎಂದರು.

ಮಾನಸಿಕ ಆರೋಗ್ಯವು ಪ್ರತಿಯೊಬ್ಬರ ಮೂಲಭೂತ ಹಕ್ಕು, ವಿಶಿಷ್ಟರ ಸೌಲಭ್ಯವಲ್ಲ. ಪ್ರತಿಯೊಬ್ಬ ನಾಗರಿಕ ರಾಷ್ಟ್ರದ ಆಸ್ತಿ. ಮಾನಸಿಕವಾಗಿ ಅಸ್ವಸ್ಥರನ್ನು ಕಡೆಗಣಿಸುವುದು ರಾಷ್ಟ್ರದ ಪ್ರಗತಿಗೆ ಮಾರಕ ಎಂದರು.

ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಸಿ.ಎನ್.ಚಂದನ್, ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ನಿರ್ದೇಶಕಿ ಡಾ.ಕೆ.ಆರ್.ದಾಕ್ಷಾಯಿಣಿ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಡಾ. ರವಿ ಜೆ.ಡಿ. ಸಲ್ಡಾನಾ, ಸಾಮಾಜಿಕ ಕಾರ್ಯ ವಿಭಾಗ ಮುಖ್ಯಸ್ಥ ಪ್ರೊ.ಆರ್. ಶಿವಪ್ಪ, ಕೆ.ಆರ್. ಆಸ್ಪತ್ರೆ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್. ರವೀಶ್, ಥಾಟ್‌ಫೋಕಸ್ ನಿರ್ದೇಶಕ ನವೀನ್‌ಗೌಡ, ಎನ್. ಆರ್. ಫೌಂಡೇಶನ್ ಕಾರ್ಯನಿರ್ವಾಹಕ ಆರ್. ಹರೀಶ್, ಸಂತಫಿಲೋಮಿನಾ ಸ್ನಾತಕೋತ್ತರ ಸಾಮಾಜಿ ಕಾರ್ಯ ವಿಭಾಗದ ಡಾ. ಸಿ.ಎ. ನೂರ್ ಮುಬಾಶೀರ್, ಗ್ರೀನ್ ಡಾಟ್ ಟ್ರಸ್ಟ್ ಕಾರ್ಯದರ್ಶಿ ಡಾ. ಸಿ.ಕೆ .ಕಂಠರಾಜು ಇತರರು ಇದ್ದರು. ಸಂತ ಫಿಲೋಮಿನಾ ಕಾಲೇಜಿನ ಮ್ಯಾನೇಜರ್ ಡಾ. ಲೌರ್ದು ಪ್ರಸಾದ್ ಜೋಸೆಫ್ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net