

ಶಿವಮೊಗ್ಗ: ಅಹಿತಕರ ಘಟನೆಯನ್ನು ಮರೆತು ನೆಮ್ಮದಿಯಿಂದ ಜೀವನ ನೆಡೆಸಲು ಮರೆವು ವರವಿದ್ದಂತೆ. ಆದರೆ ಮರೆವು ಹೆಚ್ಚಾದರೆ ಅದು ಅಪಾಯಕಾರಿ ಎಂದು ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಎಸ್.ಕೆ.ಕಿರಣ್ ಹೇಳಿದರು.
ನಗರದ ಗೋಪಾಳದ ಜೀವನ ಸಂಜೆ ವೃದ್ಧಾಶ್ರಮದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೆಗ್ಗಾನ್ ಬೋಧನಾ ಆಸ್ಪತ್ರೆ ಆಶ್ರಯದಲ್ಲಿ ಮೆದುಳಿನ ಆರೋಗ್ಯ ಉಪಕ್ರಮ ಕಾರ್ಯಕ್ರಮದಡಿ ಜಾಗತಿಕ ಆಲ್ಝೆ ಮರ್ ದಿನದಲ್ಲಿ ಅವರು ಮಾತನಾಡಿದರು.
60 ವರ್ಷದ ಬಳಿಕ ಅರಳು ಮರಳು ಎಂಬುದು ಸಾಮಾನ್ಯವಾದ ರೋಗ. ಈಗಿನ ವೈದ್ಯಕೀಯ ವ್ಯವಸ್ಥೆಯಲ್ಲಿ ಮೆರೆವಿನ ಕಾಯಿಲೆಗೆ ಉತ್ತಮ ಚಿಕಿತ್ಸೆ ಮತ್ತು ಪರಿಹಾರವಿದೆ. ಅದರ ಉಪಯೋಗ ಪಡೆದುಕೊಂಡು ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಮನೋವೈದ್ಯ ಡಾ. ಎಚ್.ಎಲ್.ಪ್ರಮೋದ್ ಮಾತನಾಡಿ, ಅರಳು ಮರಳು ಎಂಬುದು ಮೆದುಳಿಗೆ ಸಂಬಂಧಪಟ್ಟ ಕಾಯಿಲೆ. ಈ ಖಾಯಿಲೆ 60 ವರ್ಷ ಮೇಲ್ಪಟ್ಟ ವಯೋವೃದ್ಧರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಮೆದುಳಿನ ನರಗಳ ಏರುಪೇರಿನ ಸಮಸ್ಯೆಯಿಂದ ಈ ಕಾಯಿಲೆ ಪ್ರಾರಂಭವಾಗುತ್ತದೆ. ಇದರೊಂದಿಗೆ ಅನೇಕ ಮಾನಸಿಕ ಸಮಸ್ಯೆಗಳು ಪ್ರಾರಂಭವಾಗುತ್ತದೆ ಎಂದರು.
ಆಲ್ಝೆ ಮರ್ ಅಂದರೆ ಮರೆವಿನ ತೊಂದರೆಯಿಂದ ವ್ಯಕ್ತಿಗಳು ಅವರ ದಿನನಿತ್ಯದ ಕೆಲಸಗಳನ್ನು ಮರೆಯುವ ಹಂತಕ್ಕೂ ಹೋಗಬಹುದು. ಮೆದುಳಿನಲ್ಲಿ ನೀರು ತುಂಬುವುದು, ಮೆದುಳಿನಲ್ಲಿ ಗೆಡ್ಡೆ ಬೆಳೆಯುವುದು, ವಿಟಮಿನ್ ಕೊರತೆ ಮತ್ತು ಮಾದಕ ವಸ್ತುಗಳ ಅತಿಯಾದ ಬಳಕೆ ಮಾಡಿದಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತದೆ. ಆದರೆ ಈ ಮರೆವು ಕಾಯಿಲೆ ಬಗ್ಗೆ ಸಮಾಜದಲ್ಲಿ ಅರಿವಿನ ಕೊರತೆ ತುಂಬಾ ಇದೆ. ಮರೆಗುಳಿತನಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದ್ದು, ಇದನ್ನು ಸುದಾರಿಸಬಹುದು. ಅಂತಹ ವ್ಯಕ್ತಿಗಳಿಗೆ ಮನೆಯಲ್ಲಿ ಅವರ ದಿನಚರಿ ನೆನಪಿಸುವುದು, ಹಳೆಯ ನೆನಪುಗಳನ್ನು ಮೆಲುಕು ಹಾಕಿಸುವುದು, ಅವರಿಗೆ ಧೈರ್ಯ ತುಂಬುವುದರ ಮೂಲಕ ಚಿಕಿತ್ಸೆಯನ್ನು ನೀಡಬಹುದು ಎಂದು ತಿಳಿಸಿದರು.
ಶಿವಮೊಗ್ಗ ಬಾಪೂಜಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮರೆವಿನ ಕಾಯಿಲೆಯು ಯಾವ ರೀತಿಯಾಗಿ ವೃದ್ದರನ್ನು ಕಾಡುತ್ತದೆ. ಅದು ಮೂಡನಂಬಿಕೆಯಾಗಿ ಹೇಗೆ ಬದಲಾಗುತ್ತದೆ ಹಾಗೂ ಮರೆವು ಕಾಯಿಲೆಗೆ ಸೂಕ್ತ ಚಿಕಿತ್ಸೆ ಹೇಗೆ ಪಡೆಯಬೇಕು ಎಂಬ ಮಾಹಿತಿಯನ್ನು ನಾಟಕ ರೂಪದಲ್ಲಿ ಪ್ರದರ್ಶಿಸಿದರು. ಹೊಸನಗರದ ಬಟ್ಟೆಮಲ್ಲಪ್ಪದ ಮಲ್ಲಿಕಾರ್ಜುನ ಕಲಾ ತಂಡವು ಜೋಗಿಪದ ಹೇಳುವ ಮೂಲಕ ಅರಿವು ಮೂಡಿಸಿತು. ಜೀವನ ಸಂಜೆ ವೃದ್ಧಾಶ್ರಮದ ಅಧ್ಯಕ್ಷ ಹಾಲಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಬಾಪೂಜಿ ನರ್ಸಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರಾಯ್ಚಲ್ ಶರಣನ್, ಶಿಕ್ಷಕಿ ಸೌಮ್ಯ ಉಪಸ್ಥಿತರಿದ್ದರು.