ರೇಬಿಸ್ ಸೋಂಕಿನ ನಿರ್ಲಕ್ಷೃ ವಹಿಸದಿರಿ

18 ndg-2
ನಿಡಗುಂದಿಯಲ್ಲಿ ಮಂಗಳವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ನಿಡಗುಂದಿ ಪಶು ಇಲಾಖೆ ಆಶ್ರಯದಲ್ಲಿ ರೇಬಿಸ್ ಲಸಿಕಾ ಅಭಿಯಾನ ಕಾರ್ಯಕ್ರಮ ನಡೆಯಿತು.
Published on

ನಿಡಗುಂದಿ: ರೇಬಿಸ್ ಸೋಂಕಿನ ಬಗ್ಗೆ ನಿರ್ಲಕ್ಷೃ ವಹಿಸದೆ ಸಕಾಲಕ್ಕೆ ನಾಯಿಗಳಿಗೆ ಚುಚ್ಚುಮದ್ದು ಹಾಕಿಸಿ ನಾಯಿಗಳನ್ನು ರೋಗದಿಂದ ದೂರವಾಗಿಸಬೇಕು ಎಂದು ಮುಖ್ಯಪಶು ವೈದ್ಯಾಧಿಕಾರಿ ಡಾ. ಸರ್ಪರಾಜ್ ಇನಾಮ್‌ದಾರ್ ಹೇಳಿದರು.

ನಿಡಗುಂದಿಯಲ್ಲಿ ಮಂಗಳವಾರ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಪಶು ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರೇಬಿಸ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೇಬಿಸ್ ಸೊಂಕಿಗೆ ಯಾವುದೇ ಚಿಕಿತ್ಸೆ ಇಲ್ಲದ ಕಾರಣ ಬೀದಿ ನಾಯಿ ಸಾಕು ನಾಯಿಗಳಿಗೆ(ಹುಚ್ಚುನಾಯಿ) ಕಚ್ಚಿದಾಗ ರೋಗ ಎಡತಾಕದಂತೆ ಮುಂಜಾಗೃತವಾಗಿ ರೋಗ ನಿರೋಧಕ ಲಸಿಕೆ ನೀಡಲಾಗುತ್ತಿದೆ. ಮಾಲೀಕರು ತಪ್ಪದೆ ತಮ್ಮ ನಾಯಿಗಳಿಗೆ ಲಸಿಕೆ ಹಾಕಿಸಬೇಕು. ರೋಗ ಉಲ್ಬಣವಾದರೆ ಸಾವು ಖಚಿತವಾಗಲಿದೆ. ಆದ್ದರಿಂದ ನಿರ್ಲಕ್ಷೃ ವಹಿಸದೆ ನಾಯಿಗಳಿಗೆ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿದರು.

ಡಾ. ಅಶೋಕ ವಾಲಿಕಾರ, ಡಾ. ಮಹೇಶ ಹೂಗಾರ ಮಾತನಾಡಿ, ಸಾಕು ನಾಯಿಗಳ ಮಾಲೀಕರು ಅವುಗಳೊಂದಿಗೆ ಆಟವಾಡುವುದು, ಕೈ ತೊಳೆಯದೆ ಊಟ ಮಾಡಬಾರದು. ನಾಯಿ ಜೊಲ್ಲಿನಲ್ಲಿ ಸೊಂಕು ಹರಡುವ ಸಾಧ್ಯತೆ ಇದ್ದು, ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದರು.

ಅಲ್ಲದೆ, ಬೀದಿ ನಾಯಿಗಳಿಗೆ ರೇಬಿಸ್ ತಡೆಗೆ ಲಸಿಕೆ ಹಾಕುವುದು ಅಸಾಧ್ಯವಾಗಿದ್ದರಿಂದಾಗಿ ಅವು ಕಚ್ಚಿದರೆ ರೋಗವು ಗಂಭೀರ ಸ್ವರೂಪವಾಗಿರುತ್ತದೆ. ಲಸಿಕೆ ಹಾಕಿಸಲು ಕರಪತ್ರ ಸೇರಿ ನಾನಾ ಮಾರ್ಗದ ಮೂಲಕ ರೇಬಿಸ್ ರೋಗದ ಜಾಗೃತಿ ಮೂಡಿಸಲಾಗುತ್ತದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಿ ತಪ್ಪದೆ ಲಸಿಕೆ ಹಾಕಿಸಿ ರೋಗ ತಡೆಗೆ ಮುಂದಾಗಬೇಕು ಎಂದರು.

ಬಿ.ಎನ್ ಪಾಟೀಲ, ಎನ್.ಎಸ್. ಇಜೇರಿ, ಎಂ.ಬಿ. ಬಿರಾದಾರ, ಎಸ್.ಬಿ. ಪಾಟೀಲ, ವಿ.ಬಿ. ಪೂಜೇರಿ, ಮೈತ್ರಿ ಕಾರ್ಯಕರ್ತರು, ಪಶು ಸಖಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net