

ರಾಯಚೂರು: ಎಚ್‌ಐವಿ ಏಡ್ಸ್ ಬಗ್ಗೆ ಸಾರ್ವಜನಿಕರು ನಿರ್ಲಕ್ಷ ತೋರದೆ ರೋಗದ ಕುರಿತು ಮಾಹಿತಿ ಪಡೆದುಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರದ ಸದಸ್ಯ ಕಾರ್ಯದರ್ಶಿ ದಯಾನಂದ ಬೇಲೂರೆ ತಿಳಿಸಿದರು.
ಸ್ಥಳೀಯ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತದಿಂದ ವಿಶ್ವ ಏಡ್ಸ್ ದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಏಡ್ಸ್ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದರು.
ಏಡ್ಸ್ ತಡೆಗೆ ಎಲ್ಲರೂ ಮುನ್ನೆಚ್ಚರಿಕೆಗೆ ಕ್ರಮಕೈಗೊಳ್ಳಬೇಕು. ರೋಗ ಬಂದಾಗ ಭಯ ಬೀಳದೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಜಿ.ಪಂ. ಸಿಇಒ ರಾಹುಲ್ ತುಕಾರಾಮ್ ಪಾಂಡ್ವೆ ಮಾತನಾಡಿ, ಜಿಲ್ಲೆಯಿಂದ ಹಿಂದಿನ ದಿನಗಳಿಗೆ ಹೋಲಿಸಿದಲ್ಲಿ ಏಡ್ಸ್ ಸೋಂಕಿತರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದರಲ್ಲೂ ತಾಯಿಯಿಂದ ಮಗುವಿಗೆ ಏಡ್ಸ್ ಬರುವ ಪ್ರಕರಣಗಳು ಶೂಣ್ಯವಾಗಿವೆ. ಜನರು ಏಡ್ಸ್ ಕುರಿತು ಜಾಗೃತರಾಗಿರುವುದು ಸಂತಸದ ವಿಚಾರವಾಗಿದೆ. ಏಡ್ಸ್ ತಡೆಗಟ್ಟುವುದು ಕೇವಲ ವೈದ್ಯಕೀಯ ಸವಾಲು ಮಾತ್ರವಲ್ಲ ಸಾಮಾಜಿಕ ಸವಾಲು ಕೂಡಾ ಆಗಿದೆ ಎಂದರು.
ಜಿಲ್ಲಾಕಾರಿ ಕಚೇರಿಯಿಂದ ಆರಂಭವಾದ ಜಾಥಾ ಪ್ರಮುಖ ಬೀದಿಗಳ ಮೂಲಕ ಡಿಎಚ್‌ಒ ಕಚೇರಿಗೆ ತಲುಪಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಡಿಎಚ್‌ಒ ಡಾ.ಸುರೇಂದ್ರಬಾಬು, ಜಿಲ್ಲಾ ಏಡ್ಸ್ ನಿಯಂತ್ರಣಾಕಾರಿ ಡಾ.ಮಹ್ಮದ್ ಶಾಕೀರ್, ಜಿಲ್ಲಾ ಸರ್ವೇಕ್ಷಣಾಕಾರಿ ಡಾ.ಗಣೇಶ, ಆರ್‌ಸಿಎಚ್ ಅಕಾರಿ ಡಾ.ನಂದಿತಾ, ರಿಮ್ಸ್ ಪ್ರಾಚಾರ್ಯ ಡಾ.ಬಸವರಾಜ ಪಾಟೀಲ್, ಮನೋರೋಗ ತಜ್ಞ ಡಾ.ಮನೋಹರ ಪತ್ತಾರ ಉಪಸ್ಥಿತರಿದ್ದರು.