

ಮಡಿಕೇರಿ: ನಾಯಿ ಕಡಿತವನ್ನು ನಿರ್ಲಕ್ಷಿಸದೇ ಲಸಿಕೆ ಪಡೆದುಕೊಳ್ಳಬೇಕು ಎಂದು ಪ್ರಾಧ್ಯಾಪಕರು ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಕೀಯವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್ ಕಿವಿಮಾತು ಹೇಳಿದರು.
ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಸುಂಟಿಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾಯಿ ಕಡಿತವನ್ನು ನಿರ್ಲಕ್ಷಿಸದೆ ಕೂಡಲೇ ರೇಬೀಸ್ ಲಸಿಕೆಯನ್ನು ಪಡೆದುಕೊಳ್ಳುವುದರಿಂದ ರೇಬೀಸ್ ರೋಗವನ್ನು ತಡೆಗಟ್ಟಬಹುದು. ಆದ್ದರಿಂದ ಪ್ರತಿಯೊಬ್ಬರು ನಾಯಿ ಕಚ್ಚಿದ ಕೂಡಲೇ ಚಿಕತ್ಸೆಪಡೆಯಿರಿ ಎಂದು ಮನವಿ ಮಾಡಿದರು.
ಆರೋಗ್ಯ ಇಲಾಖೆ, ಪಶುವೈದ್ಯಕೀಯ ಇಲಾಖೆ, ಪುರಸಭೆ, ಪಂಚಾಯಿತಿ, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಶ್ರಮಿಸಿ ಬೀದಿ ನಾಯಿ ಮತ್ತು ಸಾಕು ಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆಯನ್ನು ಹಾಕುವ ಮೂಲಕ ಜಿಲ್ಲೆಯನ್ನು ರೇಬಿಸ್ ಮುಕ್ತಗೊಳಿಸಬಹುದು ಎಂದರು.
ರೋಟರಿ ಮಿಸ್ಕಿ ಹಿಲ್ಸ್‌ನ ಅಧ್ಯಕ್ಷ ಪ್ರಸಾದ್ ಗೌಡ ಕಾರ್ಯಕ್ರಮ ಉದ್ಘಾಟಿಸಿ, ರೇಬಿಸ್ ಜನಜಾಗೃತಿ ಬಹಳ ಮುಖ್ಯವಾಗಿದ್ದು, ರೋಟರಿ ಸಂಸ್ಥೆ ಸಹಾಯಕ್ಕೆ ಯಾವಾಗಲೂ ಸಿದ್ಧವಿದೆ ಎಂದರು.
ಮಡಿಕೇರಿ ತಾಲೂಕು ಆರೋಗ್ಯಾಧಿಕಾರಿ ಡಾ.ಚೇತನ್, ರೇಬೀಸ್ ಲಸಿಕೆಯ ಮಹತ್ವ ಮತ್ತು ಸಾಕುಪ್ರಾಣಿಗಳಿಗೆ ಲಸಿಕೆ ನೀಡುವ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಇಂಟರ್ನ್‌ಗಳು ರೇಬೀಸ್ ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಯಾರಿಸಿದ ಚಾರ್ಟ್‌ಗಳ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣವನ್ನು ನೀಡಲಾಯಿತು. ಮಿಸ್ಟಿ ಹಿಲ್ಸ್‌ನ ಪದಾಧಿಕಾರಿಗಳು, ಸಾರ್ವಜನಿಕರು, ಸ್ಥಳೀಯರು ಪಾಲ್ಗೊಂಡಿದ್ದರು.