ಕರೊನಾ ಲಸಿಕೆ ಪಡೆಯಲು ಹಿಂದೇಟು!, ಮೊದಲ ಹಂತದಲ್ಲಿ ಶೇ.61 ಮಂದಿಗಷ್ಟೆ ವಾಕ್ಸಿನ್, ಎರಡನೇ ಹಂತದಲ್ಲೂ ನೀರಸ ಪ್ರತಿಕ್ರಿಯೆ

8dbp5(corona vacsin)
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಸಾರ್ವಜನಿಕರನ್ನು ಕರೊನಾ ತಪಾಸಣೆಗೊಳಪಡಿಸಲು ಹರಸಾಹಸ ನಡೆಸಿದ್ದ ಜಿಲ್ಲಾಡಳಿತಕ್ಕೆ ಈಗ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ದುಂಬಾಲು ಬೀಳುವ ಪರಿಸ್ಥಿತಿ ಎದುರಾಗಿದೆ.

ಹೌದು! ಕರೊನಾ ತೀವ್ರತೆ ಹತೋಟಿಗೆ ತರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತೀವ್ರಗತಿಯಲ್ಲಿ ಕರೊನಾ ತಪಾಸಣೆ ನಡೆಸಿ ಕೂಡಲೇ ಸೋಂಕಿತರನ್ನು ಚಿಕಿತ್ಸೆಗೊಳಪಡಿಸುವಂತೆ ಆದೇಶ ನೀಡಿತ್ತು. ಅದರಂತೆ ಗ್ರಾಮಾಂತರ ಜಿಲ್ಲಾ ಆರೋಗ್ಯ ಇಲಾಖೆಗೆ ಪ್ರತಿನಿತ್ಯ 400ರಿಂದ 500 ಮಂದಿಯನ್ನು ತಪಾಸಣೆಗೊಳಪಡಿಸುವ ಗುರಿ ನಿಗದಿ ಮಾಡಲಾಗಿತ್ತು. ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿಗಳ ತಂಡ ಗುರಿ ಮುಟ್ಟಲು ಹರಸಾಹಸ ನಡೆಸಿ ಭಾಗಶಃ ಯಶಸ್ವಿಯೂ ಆಗಿತ್ತು. ಕರೊನಾ ತಪಾಸಣೆಗೆ ಹಿಂದೇಟು ಹಾಕುತ್ತಿದ್ದ ಸಾರ್ವಜನಿಕರ ಮನವೊಲಿಸುವಲ್ಲಿ ಬೆವರು ಹರಿಸಿದ್ದ ಆರೋಗ್ಯ ಇಲಾಖೆಗೆ ಈಗ ಕರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ದುಂಬಾಲು ಬೀಳುತ್ತಿದ್ದರೂ ಹೆಸರು ನೋಂದಣಿ ಮಾಡಿಕೊಂಡಿರುವ ಕರೊನಾ ವಾರಿಯರ್ಸ್‌ಗಳೇ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಆರೋಗ್ಯ ಇಲಾಖೆಗೆ ಸವಾಲಾಗಿದೆ.

ಶೇ.61.24 ಯಶಸ್ವಿ: ಜನವರಿ 15ರಿಂದ ಜಿಲ್ಲೆಯಾದ್ಯಂತ ಆರಂಭವಾದ ಲಸಿಕೆ ವಿತರಣೆಗೆ ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲ. ಪ್ರಥಮ ಆದ್ಯತೆಯಾಗಿ ವಾರಿಯರ್ಸ್‌ಗಳಿಗೆ ಲಸಿಕೆ ವಿತರಣೆ ಆರಂಭಿಸಿದರೂ ಇದುವರೆಗೆ ಶೇ.61.24 ಪ್ರಗತಿ ಕಾಣಲಷ್ಟೇ ಸಾಧ್ಯವಾಗಿದೆ. ಕರೊನಾ ಲಸಿಕೆಗೊಳಪಡಬೇಕಾದವರ ಪಟ್ಟಿ ಸಿದ್ಧಪಡಿಸಿದ ಆರೋಗ್ಯ ಇಲಾಖೆ ಸೂಚನೆಯಂತೆ ಜಿಲ್ಲೆಯಾದ್ಯಂತ ಮೊದಲ ಹಂತದಲ್ಲಿ 9,468 ಮಂದಿ ಹೆಸರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 5,798 ಮಂದಿ ಲಸಿಕೆ ಪಡೆದಿದ್ದಾರೆ. ಉಳಿದ 3670 ಮಂದಿ ಇದುವರೆಗೆ ಲಸಿಕೆ ಪಡೆದಿಲ್ಲ. ಪ್ರತಿನಿತ್ಯ ಎಸ್ಸೆಮ್ಮೆಸ್ ಮೂಲಕ ಸಂದೇಶ ರವಾನಿಸಲಾಗುತ್ತಿದೆ. ಕರೆ ಮಾಡಿ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ ಆದರೂ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ದಿನ ಒಂದೇ ಹಾಜರಿ: ಮೊದಲ ಹಂತದ ಲಸಿಕಾ ಕಾರ್ಯಕ್ರಮದ ಬಳಿಕ ಪೊಲೀಸ್, ಶಿಕ್ಷಕರು, ಸರ್ಕಾರಿ ಅಧಿಕಾರಿಗಳಿಗೆ ಎರಡನೇ ಹಂತದ ಲಸಿಕಾ ಕಾರ್ಯಕ್ರಮ ೆ.8ರಿಂದ ಆರಂಭವಾಗಿದೆ. ಹೆಸರು ನೋಂದಾಯಿಸಿಕೊಂಡಿರುವವರಿಗೆ ಮೊಬೈಲ್ ಸಂದೇಶದ ಜತೆಗೆ ನಿರಂತರ ಕರೆ ಮಾಡಲಾಗುತ್ತಿದೆ. ಆದರೂ ಮೊದಲ ದಿನ ಕೇವಲ ಒಬ್ಬ ವ್ಯಕ್ತಿ ಲಸಿಕೆ ಹಾಕಿಸಿಕೊಂಡಿರುವುದು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ದಂಗುಬಡಿಸಿದೆ. ಎರಡನೇ ಹಂತದಲ್ಲಿ 8487 ಮಂದಿ ನೋಂದಾಯಿಸಿಕೊಂಡಿದ್ದು ಎಷ್ಟು ಮಂದಿ ಲಸಿಕೆ ಪಡೆಯಲಿದ್ದಾರೆ ಎಂಬುದರ ಮೇಲೆ ಕಾರ್ಯಕ್ರಮದ ಯಶಸ್ಸಿನ ಅಂಕಿ ಅಂಶ ತಿಳಿದುಬರಲಿದೆ.

ಅಡ್ಡ ಪರಿಣಾಮದ ಭೀತಿ: ಜಿಲ್ಲೆಯಾದ್ಯಂತ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ. ಆದರೆ ಲಸಿಕೆ ಪಡೆದರೆ ಅಡ್ಡಪರಿಣಾಮವಾಗುತ್ತದೆ ಎಂಬ ವದಂತಿ ಹರಿದಾಡುತ್ತಿದ್ದು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಕೆಲವು ಕಡೆಗಳಲ್ಲಿ ಲಸಿಕೆ ಪಡೆದ ಬಳಿಕ ಅಸ್ವಸ್ಥರಾದವರಂತೆ ಎಂಬ ಗಾಳಿ ಸುದ್ದಿಗಳೂ ಸಹ ಇದಕ್ಕೆ ಕಾರಣ ಎಂಬುದು ಆರೋಗ್ಯಾಧಿಕಾರಿಗಳ ಅಭಿಪ್ರಾಯವಾಗಿದೆ.

ನಾನು ಲಸಿಕೆ ಹಾಕಿಸಿಕೊಂಡಿದ್ದೇನೆ, ಯಾವುದೇ ಅಡ್ಡಪರಿಣಾಮವಿಲ್ಲ. ಸುಖಾಸುಮ್ಮನೆ ವದಂತಿಗಳಿಗೆ ಕಿವಿಗೊಡಬಾರದು. ಲಸಿಕೆ ಹಾಕಿಸಿಕೊಂಡ ಬಳಿಕ ಕರೊನಾ ಭೀತಿ ಇಲ್ಲವಾಗಿದೆ, ಆತ್ಮವಿಶ್ವಾಸ ಹೆಚ್ಚಾಗಿದ್ದು, ನೆಮ್ಮದಿಯಾಗಿ ದಿನನಿತ್ಯದ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಡಾ.ಮಂಜುಳಾದೇವಿ, ಜಿಲ್ಲಾ ಆರೋಗ್ಯಾಧಿಕಾರಿ ಪ್ರಸ್ತುತ ಎರಡನೇ ಹಂತದ ಲಸಿಕಾ ಕಾರ್ಯಕ್ರಮ ಆರಂಭವಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಲಸಿಕೆ ಪಡೆಯುತ್ತಿದ್ದಾರೆ. ಇದರಿಂದ ಯಾವುದೇ ದುಷ್ಪರಿಣಾವಿಲ್ಲ. ಇದು ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ಲಸಿಕಾ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು. ಡಾ.ಜಗದೀಶ್ ಕೆ.ನಾಯಕ್, ಅಪರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net