

ಎನ್.ಆರ್.ಪುರ: ಹೆಣ್ಣು ಮಕ್ಕಳು ಋತುಸ್ರಾವ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆಗೆ ಗಮನ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಸಲಹೆ ನೀಡಿದರು.
ಮಂಗಳವಾರ ಪಟ್ಟಣದ ಎನ್.ಆರ್.ಪುರ -2 ಅಂಗನವಾಡಿ ಕೇಂದ್ರದಲ್ಲಿ ಋತುಸ್ರಾವ ನೈರ್ಮಲ್ಯ ನಿರ್ವಹಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಸಹ ಋತುಸ್ರಾವ ಸಮಯದಲ್ಲಿ ಹೆಣ್ಣು ಮಕ್ಕಳ ವೈಯಕ್ತಿಕ ಸ್ವಚ್ಛತೆ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಜಾಹೀರಾತು ನೀಡುತ್ತಿದೆ ಎಂದರು.
ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ದಾಕ್ಷಾಯಿಣಿಬಾಯಿ ಮಾತನಾಡಿ, ಪ್ರತಿ ವರ್ಷ ಮೇ 28ರಂದು ಋತುಸ್ರಾವ ನೈರ್ಮಲ್ಯ ದಿನ ಆಚರಿಸಲಾಗುತ್ತಿದೆ. ಯೋಜನೆಯು 2014ರ ಮೇ 28ರಂದು ಜಾರಿಗೆ ಬಂದಿದೆ. ಹರೆಯದ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಬಗ್ಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಉಪಯೋಗಿಸುವ ಬಗ್ಗೆ ಹಾಗೂ ಸ್ವಚ್ಛತೆಯಿಂದ ವಿಲೇವಾರಿ ಮಾಡುವ ಮಾಹಿತಿ ನೀಡಲಾಗುವುದು. ಸರ್ಕಾರದಿಂದ ಶುಚಿ ಸಾನಿಟರಿ ಪ್ಯಾಡ್‌ಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳ ಮೂಲಕ ಉಚಿತ ವಿತರಣೆ ಮಾಡಲಾಗಿದೆ ಎಂದರು.
ಹೆಣ್ಣು ಮಕ್ಕಳು ಮುಟ್ಟಿನ ಬಗ್ಗೆ ಯಾವುದೇ ಮೂಢನಂಬಿಕೆ ಇಟ್ಟುಕೊಳ್ಳಬಾರದು. ಋತುಸ್ರಾವ ಎನ್ನುವುದು ಹೆಣ್ಣು ಮಕ್ಕಳಲ್ಲಿ ನೈಸರ್ಗಿಕ ಕ್ರಿಯೆ. ಆದ್ದರಿಂದ ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳಿಗೆ ಸ್ನೇಹದ ವಾತಾವರಣ ಕಲ್ಪಿಸಿ ಕೊಡಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿ ಸುಪ್ರಿತಾ, ಅಂಗನವಾಡಿ ಕಾರ್ಯಕರ್ತೆ ಅನಿತಾ ೆಟ್ಟಿ,ಆಶಾ ಕಾರ್ಯಕರ್ತೆ ಕುಸಮಾ, ಕಿಶೋರಿ ಅನುಷಾ ಮತ್ತು ಸೀ ಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.