

ಮೈಸೂರು: ಜ್ಯೋತಿಷ್ಯಶಾಸ್ತ್ರದ ಬಗ್ಗೆ ತಪ್ಪು ಕಲ್ಪನೆ ಬೇಡ, ಜ್ಯೋತಿಷ್ಯಶಾಸ್ತ್ರದ ಮಹತ್ವವನ್ನು ಇಂದಿನ ಸಮಾಜಕ್ಕೆ ಸರಿಯಾದ ರೀತಿಯಲ್ಲಿ ಅರ್ಥ ಮಾಡಿಸುವ ಕಾರ್ಯ ಆಗಬೇಕು ಎಂದು ಮೇಲುಕೋಟೆಯ ವಂಗೀಪುರಂ ನಂಬಿಮಠದ ಇಳೈ ಆಳ್ವಾರ್ ಸ್ವಾಮೀಜಿ ಹೇಳಿದರು.
ವಿಶ್ವ ವಿಕಾಸ ಟ್ರಸ್ಟ್ ವತಿಯಿಂದ ಶ್ರೀರಾಂಪುರದಲ್ಲಿ ಭಾನುವಾರ ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ,ವಾಸ್ತು ವಿಜ್ಞಾನ ,ಪೂರ್ವ ಪೀಠಿಕೆ ಕುರಿತು ಹಮ್ಮಿಕೊಂಡ ಕಾರ್ಯಗಾರದಲ್ಲಿ ಮಾತನಾಡಿ, ಸಮಾಜದಲ್ಲಿ ಜ್ಯೋತಿಷ್ಯದ ಬಗ್ಗೆ ತಪ್ಪು ಕಲ್ಪನೆಯಿದ್ದು, ಅದನ್ನು ಹೋಗಲಾಡಿಸ ಬೇಕು. ಕೆಲವರು ಜ್ಯೋತಿಷ್ಯ ಶಾಸ್ತ್ರವೆಂದರೆ ಮೂಗು ಮುರಿಯುತ್ತಾರೆ. ಅಂಥವರು ಜ್ಯೋತಿಷ್ಯದ ಬಗ್ಗೆ ಸರಿಯಾಗಿ ಮನನ ಮಾಡಿದರೆ ಅರಿವು ಮೂಡಲಿದೆ ಎಂದರು.
ವಾಸ್ತು ತಜ್ಞ ರಾಮ್ ಶ್ರೀಕಾಂತ್ ತೇಜ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಜ್ಯೋತಿಷ್ಯ ಅಧ್ಯಯನ ಶಾಸ್ತ್ರವನ್ನು ಉದ್ಯಮ ವನ್ನಾಗಿ ಬಳಸಿಕೊಳ್ಳುವ ಬದಲು ಸಮಾಜದ ಅಭಿವೃದ್ಧಿಗೆ ಬಳಸಬೇಕು. ನಮ್ಮ ಪ್ರಾಚೀನ ವಿದ್ಯೆಗಳಿಗೆ ಗೌರವಿಸುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದರು.
ಪ್ರಪಂಚದಲ್ಲಿಯೇ ಶ್ರೇಷ್ಠ ವಿದ್ಯೆಗಳಾದ ಆಗಮ, ವೇದ, ಜ್ಯೋತಿಷ್ಯ ಮತ್ತು ಯೋಗವನ್ನು ಕಲಿಯಲು ಉತ್ತಮವಾದ ಮನೋಸ್ಥಿತಿ ಬೇಕು. ಇವೆಲ್ಲವೂ ವೈಜ್ಞಾನಿಕ ನೆಲೆಗಟ್ಟು ಹೊಂದಿರುವ ಶಾಸ್ತ್ರಗಳು. ಪ್ರಪಂಚದಲ್ಲಿರುವ ಶಾಸ್ತ್ರಗಳಲ್ಲಿ ಅತಿ ಪುರಾತನವಾದದ್ದು ‘ಜ್ಯೋತಿಷ್ಯಶಾಸ್ತ್ರ’. ಜ್ಯೋತಿ ಎಂದರೆ ಬೆಳಕು, ಶಾಸ್ತ್ರ ಎಂದರೆ ವಿಜ್ಞಾನ. ಇದನ್ನು ಇಂಗ್ಲೀಷ್‌ನಲ್ಲಿ ಅಸ್ಟ್ರಾಲಜಿ ಎಂದು ಕರೆಯುತ್ತಾರೆ. ಈ ಜ್ಯೋತಿಷ್ಯ ಶಾಸ್ತ್ರವು ಮೊದಲಿಗೆ ನಮ್ಮ ಭಾರತದಲ್ಲಿಯೇ ಹುಟ್ಟಿದ್ದು ಎಂದು ಹೇಳಿದರು.
ಜ್ಯೋತಿಷ್ಯ ಶಾಸ್ತ್ರವು ಭಾರತೀಯರ ಜೀವನದಲ್ಲಿ ಬಹಳ ಮುಖ್ಯ ಸ್ಥಾನ ಪಡೆದಿದೆ. ಹುಟ್ಟಿನಿಂದ ಸಾಯುವವರೆಗೂ ಜೀವನದಲ್ಲಿ ಆಗುಹೋಗುವ ಶುಭ ಹಾಗೂ ಅಶುಭ ಫಲಗಳನ್ನು ನಿರ್ಣಯಿಸಲು ಈ ಶಾಸ್ತ್ರ ಪ್ರಮುಖವಾಗಿದೆ. ಒಂದು ಮಗು ಜನನವಾದ ತಕ್ಷಣ ಅದರ ನಕ್ಷತ್ರ ಯಾವುದೆಂದು ತಿಳಿಯಲು ಮಾತಾಪಿತೃಗಳು ಉತ್ಸಾಹದಲ್ಲಿರುತ್ತಾರೆ ಎಂದರು
ವಿಶ್ವವಿಕಾಸ ಟ್ರಸ್ಟ್ ಅಧ್ಯಕ್ಷ ಮಂಟೇಲಿಂಗಾಚಾರ್, ಅಖಿಲ ಭಾರತ ವಿಶ್ವಕರ್ಮ ಪರಿಷತ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪ್ರಕೃತಿ ಸುರೇಶ್, ವಾಣಿಜ್ಯ ತೆರಿಗೆ ಇಲಾಖೆ ಹಾಸನ ಜಿಲ್ಲೆಯ ವಾಣಿಜ್ಯ ತೆರಿಗೆ ಉಪ ಆಯುಕ್ತ ಡಿ.ಎಂ. ಮಂಜುನಾಥ್ ಸೋಸಲೆ, ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವಿಶೇಷ ಭೂ ಸ್ವಾದಿನಾಧಿಕಾರಿ ವಿ. ಪ್ರಿಯದರ್ಶಿನಿ, ಕಾಂಗ್ರೆಸ್ ಮುಖಂಡ ಎನ್.ಎಂ. ನವೀನ್ ಕುಮಾರ್, ಹಾರೋಹಳ್ಳಿಯ ಶ್ರೀ ಶನೇಶ್ವರ ದೇವಸ್ಥಾನ ಧರ್ಮದರ್ಶಿ ಚೆಲುವಮೂರ್ತಿ, ಸಂಖ್ಯಾಶಾಸ್ತ್ರಜ್ಞ ಮಾಲತೇಶ್ ಆಚಾರ್ಯ, ಸಮಾಜ ಸೇವಕ ವಿಕ್ರಮ ಅಯ್ಯಂಗಾರ್ ಹಾಗೂ ಇತರರು ಇದ್ದರು.