

ಕೊಳ್ಳೇಗಾಲ: ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಜಾತಿ, ಧರ್ಮ, ಭಾಷೆ ಆಧಾರದಲ್ಲಿ ದ್ವೇಷ ಮಾಡುವುದನ್ನು ಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ನ್ಯಾಷನಲ್ ಶಾಲಾ ಆವರಣದಲ್ಲಿ ಶನಿವಾರ ಸಂಘ ಸಂಸ್ಥೆಗಳು, ಭಕ್ತವೃಂದ ಹಾಗೂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಜಗದ್ಗುರು ಡಾ.ಶ್ರೀ ರಾಜೇಂದ್ರ ಮಹಾಸ್ವಾಮಿಗಳವರ 109ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತ ನಾಡಿದರು.
ಶ್ರೀ ರಾಜೇಂದ್ರ ಮಹಾಸ್ವಾಮಿ ಅವರು ಸುತ್ತೂರು ಮಠಕ್ಕೆ ಬುನಾದಿ ಹಾಕಿಕೊಟ್ಟರು. ಗ್ರಾಮೀಣ ಜನರ ಬದುಕನ್ನು ಅರಿತಿದ್ದವರು. ಸಮಾಜದಲ್ಲಿ ಪ್ರತಿಭೆ ಹಾಗೂ ಸಾಧನೆಯಿಂದ ಮನುಷ್ಯನ ಯೋಗ್ಯತೆಯನ್ನು ಅಳೆಯದೆ, ಜಾತಿ ಆಧಾರದ ಮೇಲೆ ಅಳೆಯುವುದನ್ನು ಕಣ್ಣಾರೆ ಕಂಡವರು. ಇಂತಹ ಸನ್ನಿವೇಶದಲ್ಲಿ ಶಿಕ್ಷಣದಿಂದಲೇ ಮಾನವನ ವಿಮೋಚನೆ ಆಗಬೇಕೆಂದು ಶ್ರೀ ಮಠದ ವತಿಯಿಂದ ಶಿಕ್ಷಣ ಸಂಸ್ಥೆ ಹಾಗೂ ವಸತಿ ನಿಲಯಗಳನ್ನು ತೆರೆದರು. ಧರ್ಮದ ಕಾರ್ಯಗಳನ್ನು ಮಾಡಿದರು. ದೇಶದಲ್ಲಿ ಸಂತರು, ಸಮಾಜ ಸುಧಾರಕರು, ದಾರ್ಶನಿಕರು, ಸೂಫಿಗಳನ್ನು ಕಂಡಿದ್ದೇವೆ. ಅವರೆಲ್ಲರೂ ಮಾನವ ಸಮಾಜ ನಿರ್ಮಾಣ ಆಗಬೇಕೆಂದು ಬೋಧಿಸಿದವರು. ಯಾರನ್ನೂ ದ್ವೇಷಿಸಬಾರದು ಎಂದು ಹೇಳಿಕೊಟ್ಟರು. ಅದರಂತೆಯೇ ಶ್ರೀ ರಾಜೇಂದ್ರ ಮಹಾಸ್ವಾಮೀಜಿ ಜೀವಿಸಿದರು. ಅವರ ಸಮಾಜಮುಖಿ ಕಾರ್ಯದಿಂದ ಸುತ್ತೂರು ಮಠ ಹೆಮ್ಮರವಾಗಿ ಬೆಳೆದಿದೆ. ದೇಶ, ವಿದೇಶದಲ್ಲಿ ಪ್ರಖ್ಯಾತಿ ಪಡೆದಿದೆ ಎಂದು ಬಣ್ಣಿಸಿದರು.
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಸುತ್ತೂರು ಮಠವು ಸಮಾಜಕ್ಕೆ ಧರ್ಮ, ದಾಸೋಹ, ಜ್ಞಾನ ನೀಡಿದೆ. ಮೈಸೂರಿನಲ್ಲಿ ಶ್ರೀ ಮಠ ಇರುವುದು ನಮ್ಮ ಹೆಮ್ಮೆಯಾಗಿದೆ ಎಂದರು.
ಕ್ಷೇತ್ರದ ಅಭಿವೃದ್ಧಿಗಾಗಿ ಮನವಿ ಸಲ್ಲಿಸಿದ ಎಆರ್‌ಕೆ: ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಂಜುಂಡಪ್ಪ ಅವರ ವರದಿ ಪ್ರಕಾರ ಹಿಂದುಳಿದ ಜಿಲ್ಲೆಯಾಗಿ ಚಾಮರಾಜನಗರ ಬಿಂಬಿಸಲಾಗಿತ್ತು. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅನೇಕ ಜನಪರ ಕೆಲಸಗಳು ನಡೆದಿವೆ. ಕೈಗಾರಿಕೆ ಸ್ಥಾಪನೆ ಮಾಡಲಾಗಿ ಉದ್ಯೋಗ ಸೃಷ್ಟಿಯಾಗಿದೆ. ಸಮಗ್ರ ನೀರಾವರಿ ಯೋಜನೆ ತಯಾರು ಮಾಡಬೇಕೆಂಬುದು ಸಚಿವರು ಹಾಗೂ ಈ ಭಾಗದ ಶಾಸಕರ ಆಶಯವಾಗಿದೆ. ಈ ಯೋಜನೆಗೆ ಮುಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಅವಕಾಶ ಮಾಡಿಕೊಡಬೇಕು. ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು. ರಕ್ತನಿಧಿ ಕೇಂದ್ರ ಆರಂಭಿಸಬೇಕು. ಎಲ್ಲ ರೀತಿ ವ್ಯೆದ್ಯಕೀಯ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು. ನಗರಸಭೆ ಮತ್ತು ಪುರಸಭೆಗಳಲ್ಲಿ ಕನಿಷ್ಠ ಪಕ್ಷವಾದರೂ ಬಿ-ಖಾತೆ ಮಾಡಿಕೊಡುವ ವಿಚಾರವಾಗಿ ತಿದ್ದುಪಡಿ ಮಾಡಿಕೊಡಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಮಾಡಿಕೊಡಬೇಕು. ಬಿ.ರಾಚಯ್ಯ ಅರಣ್ಯ ಭೂಮಿ ಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ರೈತಾಪಿ ವರ್ಗದವರಿಗೆ ಸಾಗುವಳಿ ಜಮೀನು ನೀಡಿದ್ದರು. ಆದರೀಗ ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುತ್ತಿದೆ. ಇಂತಹ ರೈತರ ಆಸ್ತಿಗಳು ರಕ್ಷಣೆ ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಮಧು ಬಂಗಾರಪ್ಪ, ಶಾಸಕರಾದ ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್‌ಪ್ರಸಾದ್, ಎಂ.ಆರ್.ಮಂಜುನಾಥ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಆರ್.ನರೇಂದ್ರ, ಎಸ್.ಬಾಲರಾಜ್, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ದತ್ತೇಶ್‌ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಸಿಇಒ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಇದ್ದರು.