ಸಂವಿಧಾನಕ್ಕೆ ಧಕ್ಕೆಯಾಗದಿರಲಿ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Untitled design (13)
Published on

ಸಂವಿಧಾನಕ್ಕೆ ಅಪಾಯವೊಡ್ಡುವ ಯಾವುದೇ ಪ್ರಯತ್ನಗಳನ್ನು ಸಹಿಸಬಾರದು. ಸಂವಿಧಾನಕ್ಕೆ ಧಕ್ಕೆಯಾದರೆ ಎಲ್ಲರೂ ಸಂಕಷ್ಟಕ್ಕೆ ಸಿಲುಕಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಅರಮನೆ ಮೈದಾನದಲ್ಲಿ ಶನಿವಾರ ಸಂವಿಧಾನದ ಅಮೃತ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ದೇಶದ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಸಂವಿಧಾನ ರಚಿಸಿದ್ದಾರೆ. ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ, ಬಲಿಷ್ಠವಾಗಿದೆ ಎಂದರು.

ನಾವು ಸಂವಿಧಾನದ ಮಾಲೀಕರು, ಸಂವಿಧಾನ ಕಿತ್ತೆಸೆಯುವುದರಲ್ಲಿ ನಮ್ಮ ಆಸಕ್ತಿಯಿಲ್ಲ. ಸಂವಿಧಾನದ ವಿರುದ್ಧ ಇರುವವರನ್ನು ಕಿತ್ತೆಸೆಯ ಬೇಕೆಂಬ ಅಬ್ರಹಾಂ ಲಿಂಕನ್ ಮಾತು ಗಳನ್ನು ಸಿಎಂ ಉಲ್ಲೇಖಿಸಿದರು. ಅಲ್ಲದೆ, ಸಂವಿಧಾನ ಬದಲಿಸಲು ಬಂದಿದ್ದೇವೆ ಎಂಬ ಹೇಳಿದ್ದ ರಾಜಕೀಯ ನಾಯಕರೊಬ್ಬರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿ, ಇಂತಹ ಪ್ರಯತ್ನಗಳನ್ನು ಹೆಡೆಮುರಿ ಕಟ್ಟುವ ಅಗತ್ಯವಿದೆ ಎಂದರು.

ಸಂವಿಧಾನದ ವಿರುದ್ಧ ಅಪಪ್ರಚಾರ: ಸಂವಿಧಾನ ದಲಿತರ ಉದ್ಧಾರಕ್ಕಾಗಿದೆ ಹಾಗೂ ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಸ್ಪಷ್ಟವಾಗಿ ಹೇಳುವುದರಿಂದ ಇದರ ವಿರುದ್ಧ ಇರುವ ಜನರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ಜನ ಅರಿತá-ಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂವಿಧಾನ, ಸಮಾನತೆ, ಮಾನವ ಸಮಾಜದ ನಿರ್ವಣದ ಪರವಾಗಿರುವವರ ಕೈಯಲ್ಲಿದ್ದರೆ ಸಂವಿಧಾನ ಯಶಸ್ವಿಯಾಗುತ್ತದೆ ಎಂದು ಸಿಎಂ ಹೇಳಿದರು.

ಸಮಾನತೆ ಸರ್ಕಾರದ ಜವಾಬ್ದಾರಿ: ದೇಶವನ್ನು ಕಾಡುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರವಿದೆ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸಮಾನತೆ ಸೃಷ್ಟಿಸಿದ ಜಾತಿ ವ್ಯವಸ್ಥೆ ತೊಲಗಿಸಲು ಸಂವಿಧಾನ ಅಸ್ತ್ರವಾಗಿದೆ. ಸಮಾನತೆ ಸ್ಥಾಪಿಸುವುದು ಸರ್ಕಾರದ ಜವಾಬ್ದಾರಿ ಹಾಗೂ ಕರ್ತವ್ಯ. ರಾಜಕೀಯ ಸ್ವಾತಂತ್ರ್ಯದ ಜತೆಗೆ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಅಷ್ಟೇ ಮುಖ್ಯವಾಗಿದೆ. ಇಲ್ಲವಾದರೆ ಅಸಮಾನತೆಯಿಂದ ನರಳಿದ ಜನರು ಪ್ರಜಾಪ್ರಭುತ್ವದ ಸೌಧ ಧ್ವಂಸ ಮಾಡುತ್ತಾರೆ ಎಂಬ ಡಾ.ಅಂಬೇಡ್ಕರ್ ಮಾತುಗಳನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದರು.

ಜಾಥಾ ಮುಕ್ತಾಯ: ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಸಂವಿಧಾನದ ಆಶಯ, ಮಹತ್ವದ ಕುರಿತು ಜಾಗೃತಿ ಮೂಡಿಸುವ ಜಾಗೃತಿ ಜಾಥಾ ಒಂದು ತಿಂಗಳು ರಾಜ್ಯದ 31 ಜಿಲ್ಲೆಗಳು, 5,600 ಗ್ರಾಪಂಗಳಲ್ಲಿ ಸಂಚರಿಸಿ ಶುಕ್ರವಾರ ಮುಕ್ತಾಯವಾಗಿದೆ. ಭಾರತದ ಸಾಂವಿಧಾನಿಕ ಮೌಲ್ಯಗಳ ರಕ್ಷಣೆ, ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ರಾಜಕೀಯರಹಿತವಾದ ರಾಷ್ಟ್ರೀಯ ಚಳವಳಿ ನಡೆಯಬೇಕಾಗಿದೆ ಎಂದರು.

ಅಂಚೆ ಲಕೋಟೆ ಬಿಡುಗಡೆ: ಸಂವಿಧಾನದ ಅಮೃತ ಮಹೋತ್ಸವ ಹೊರ ತಂದ ವಿಶೇಷ ಅಂಚೆ ಲಕೋಟೆಯನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಜತೆಗಿದ್ದರು.

ಜಾಥಾ ಸಂದರ್ಭದಲ್ಲಿ ಅತ್ಯುತ್ತಮ ಸ್ತಬ್ಧಚಿತ್ರಗಳ ಪ್ರದರ್ಶನಕ್ಕಾಗಿ ಚಾಮರಾಜನಗರ, ತುಮಕೂರು, ದಾವಣಗೆರೆ ಜಿಲ್ಲೆಗಳು, ಅತ್ಯುತ್ತಮ ಚಟುವಟಿಕೆಗಳಿಗಾಗಿ ಮೈಸೂರು, ಕೊಡಗು, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳಿಗೆ ಬಹುಮಾನ, ನೆನಪಿನ ಕಾಣಿಕೆ ವಿತರಿಸಲಾಯಿತು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಿವೃತ್ತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ, ಎಚ್.ಎನ್.ನಾಗಮೋಹನ್ ದಾಸ್, ಶಾಸಕ ಎಸ್.ಟಿ. ಸೋಮಶೇಖರ್, ಅಧಿಕಾರಿಗಳಾದ ಡಾ.ಶಾಲಿನಿ ರಜನೀಶ್, ಸಿ.ಶಿಖಾ, ಮಣಿವಣ್ಣನ್ ಇದ್ದರು.

ಗಮನಸೆಳೆದ ಬಾಲಕ

ಚಾಮರಾಜನಗರದ ಬಾಲಕ ತೇಜಸ್ ಚಕ್ರವರ್ತಿ ಸಂವಿಧಾನ ಅಧ್ಯಾಯಗಳು, ಅನುಚ್ಛೇದ, ಪ್ರಾಮುಖ್ಯತೆ ಬಗ್ಗೆ ಅರಳು ಹುರಿದಂತೆ ಮಾತನಾಡಿ ಸೂಜಿಗಲ್ಲಿನಂತೆ ಸೆಳೆದ. ವೇದಿಕೆ ಮೇಲಿದ್ದ ಗಣ್ಯರು ಹಾಗೂ ನೆರೆದ ಜನರು ಚಪ್ಪಾಳೆ ತಟ್ಟಿ ಹಷೋದ್ಗಾರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net