

ಶಿರಹಟ್ಟಿ: ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನ ಒಂದು ತಿಂಗಳವರೆಗೆ ನಡೆಯಲಿದ್ದು ಪ್ರತಿ ಮನೆಗೆ ನರೇಗಾ ಯೋಜನೆಯ ಮಾಹಿತಿ ತಲುಪಿಸುವ ಗುರಿ ಹೊಂದಲಾಗಿದೆ ಎಂದು ತಾಪಂ ಇಒ ಡಾ. ಎನ್.ಎಚ್. ಓಲೇಕಾರ ಹೇಳಿದರು.
ಪ್ರಚಾರ ವಾಹಿನಿ ರಥಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ‘ಪ್ರತಿಯೊಬ್ಬರಿಗೂ ನರೇಗಾ ಯೋಜನೆಯಡಿ ಉದ್ಯೋಗ ನೀಡಲು ಸರ್ಕಾರ ನಿರ್ದೇಶನ ನೀಡಿದ್ದು ಯಾರೊಬ್ಬರು ಉದ್ಯೋಗ ಹುಡುಕಿಕೊಂಡು ಗುಳೆ ಹೋಗಬಾರದು. ಈ ಬಾರಿ ಬರಗಾಲ ಘೋಷಣೆ ಮಾಡಿದ್ದರಿಂದ ಹೆಚ್ಚುವರಿಯಾಗಿ 150 ದಿನಗಳ ಕೆಲಸ ನೀಡಲಾಗುತ್ತದೆ ಕಾರ್ಮಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಪ್ರತಿ ಗ್ರಾಮ ಹಾಗೂ ಗ್ರಾಪಂ ಕಚೇರಿಯಲ್ಲಿ ನರೇಗಾ ಯೋಜನೆ ಬಗ್ಗೆ ಕಾಮಗಾರಿಗಳ ಬೇಡಿಕೆ ಪೆಟ್ಟಿಗೆಯನ್ನಿಟ್ಟು ಒಂದು ತಿಂಗಳ ಕಾಲ ಬೇಡಿಕೆ ಸ್ವೀಕರಿಸಲಾಗುತ್ತಿದೆ. ಜನರಿಂದ ಸಂಗ್ರಹಿಸಿದ ಅರ್ಜಿಗಳನ್ನು ಪರಿಶೀಲಿಸಿ ನ.15 ರೊಳಗೆ ವಾರ್ಡ್ ಸಭೆಗಳಲ್ಲಿ ಕಾಮಗಾರಿ ಪಟ್ಟಿ ಅನುಮೋದನೆ ಪಡೆದು ನ.30 ರೊಳಗೆ ಗ್ರಾಮಸಭೆ ಪೂರ್ಣಗೊಳಿಸಿ ವಾರ್ಷಿಕ ಕ್ರಿಯಾಯೋಜನೆಗೆ ಅನುಮೋದನೆ ಪಡೆದುಕೊಳ್ಳಬೇಕು. ಗ್ರಾಮ ಸಭೆಯ ಕ್ರಿಯಾಯೋಜನೆ ಡಿ. 5 ರೊಳಗೆ ತಾಪಂ.ಗೆ ಸಲ್ಲಿಸಿ ಡಿ.20 ರೊಳಗೆ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಗೆ ಸಲ್ಲಿಸಬೇಕು ಎಂದರು.
ನರೇಗಾ ಸಹಾಯಕ ನಿರ್ದೇಶಕ ಶಿವಕುಮಾರ ವಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಇಸಿ ಸಂಯೋಜಕ ಮಂಜುನಾಥಸ್ವಾಮಿ, ಪಿಡಿಒ, ಕಾರ್ಯದರ್ಶಿಗಳು ಹಾಗೂ ತಾಪಂ ಸಿಬ್ಬಂದಿ ಇದ್ದರು.