ಸಾಮಾಜಿಕ ಜಾಲತಾಣದ ಸುದ್ದಿಗಳಿಗೆ ಮಹತ್ವ ಬೇಡ

Untitled-2
ದೊಡ್ಡಬಳ್ಳಾಪುರದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್​ ಇಲಾಖೆಯಿಂದ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮಾತನಾಡಿದರು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ತಹಸೀಲ್ದಾರ್​ ವಿಭಾ ವಿದ್ಯಾ ರಾಥೋಡ್​, ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್​, ಡಿವೈಎಸ್ಪಿ ಪಿ.ರವಿ, ಇನ್​ಸ್ಪೆಕ್ಟರ್​ಗಳಾದ ಅಮರೇಶ್​ ಗೌಡ, ಸಾದಿಕ್​ ಪಾಷ ಇದ್ದರು.
Published on

ದೊಡ್ಡಬಳ್ಳಾಪುರ : ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿಗಳ ಬಗ್ಗೆ ಗಮನಹರಿಸಬೇಡಿ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.

ಬಕ್ರೀದ್​ ಪ್ರಯುಕ್ತ ನಗರದ ಎಬಿಎಂ ಕನ್ವೆನ್ಷನ್​ ಹಾಲ್​ನಲ್ಲಿ ಮಂಗಳವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್​ ಇಲಾಖೆ ವತಿಯಿಂದ ಆಯೋಜಿಸಿದ್ದ ಹಿಂದು&ಮುಸ್ಲಿಂ ಸಮಾಜದ ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಬಕ್ರೀದ್​ ಎಂದರೆ ಉಳ್ಳವರು ಇಲ್ಲದವರಿಗೆ ದಾನ ನೀಡುವ ಸಂಕೇತ. ಎಲ್ಲರೂ ಭಗವಂತನ ಧ್ಯಾನ ಮಾಡುವುದು ಮುಕ್ತಿಗಾಗಿ. ಶಾಂತಿ ಸೌಹರ್ದತೆಯಿಂದ ಹಬ್ಬ ಆಚರಿಸೋಣ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳ ಬಗ್ಗೆ ತಲೆ ಕೆಡಿಸಿಕೊಂಡು ಪ್ರಚೋದನೆಗೆ ಒಳಗಾಗಬೇಡಿ. ಅದನ್ನು ನೋಡಿಕೊಳ್ಳಲು ಪೊಲೀಸ್​ ಇಲಾಖೆ ಇದೆ. ನೀವು ಶಾಂತಿ ಸೌಹಾರ್ದತೆ, ಪರಸ್ಪರ ಪ್ರೀತಿ ವಿಶ್ವಾಸದಿಂದ ದೇವರ ಧ್ಯಾನ ಮಾಡಿ. ಅಶಕ್ತರಿಗೆ ಕೈಲಾದಷ್ಟು ದಾನ ಮಾಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಎಂದರು.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಹಬ್ಬಗಳನ್ನು ಖುಷಿ ಮತ್ತು ಸಂತೋಷದಿಂದ ಆಚರಿಸಿ. ಆದರೆ ನಿಮ್ಮ ಆಚರಣೆಗಳು ಇನ್ನೊಬ್ಬರಿಗೆ ತೊಂದರೆಯಾಗಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳ ಸತ್ಯ ಸತ್ಯತೆಯ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದು. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕೆಲಸ. ಇಲಾಖೆ ಸಾಮಾಜಿಕ ಜಾಲತಾಣದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಸುಳ್ಳು ಸುದ್ದಿ ಹಬ್ಬಿಸುವವರು ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವವರನ್ನು ಎಡೆಮುರಿ ಕಟ್ಟುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net