

ಲಿಂಗದಹಳ್ಳಿ: ಖಾಸಗಿ ಹಾಲಿನ ಡೈರಿಗಳ ಅಮಿಷಕ್ಕೆ ಒಳಗಾಗದೇ ಸರ್ಕಾರಿ ಸೌಮ್ಯದ ನಂದಿನಿ ಡೈರಿಗೆ ಹಾಲನ್ನು ಹಾಕುವ ಮೂಲಕ ಸರ್ಕಾರದಿಂದ ಸಿಗುವ ಅನೇಕ ಸೌಲಭ್ಯ ಬಳಸಿಕೊಳ್ಳುವ ಜತೆಗೆ ಹೈನುಗಾರರು ಹೆಚ್ಚಿನ ಲಾಭಗಳಿಸಬಹುದು ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಎಸ್.ಡಿ.ಸೋನಾಲ್‌ಗೌಡ ಹೇಳಿದರು.
ತಣಿಗೆಬೈಲು ಗ್ರಾಮದ ಶ್ರೀ ಚೌಡೇಶ್ವರಿ ಪ್ರೌಢಶಾಲೆ ಸಮಿಪದ ಹಾಲು ಸಂಗ್ರಹಣಾ ಕೊಠಡಿ ಉದ್ಘಾಟಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಜೂನ್‌ನಲ್ಲಿ 15 ಲಕ್ಷ ಲೀಟರ್ ಹಾಲು ಒಕ್ಕೂಟಕ್ಕೆ ಬರುತ್ತಿದ್ದು, ಇದರಿಂದ ವಿವಿಧ ರೀತಿಯ ಹಾಲು, ಮೊಸರು, ಮಜ್ಜಿಗೆ ಜತೆಗೆ 180 ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಪ್ರತಿ ನಿತ್ಯ ಹೊರ ರಾಜ್ಯಗಳಿಗೆ 5 ಲಕ್ಷ ಲೀಟರ್ ಹಾಲನ್ನು ಕಳುಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 965 ಕೋಟಿ ರೂ. ವೆಚ್ಚದಲ್ಲಿ ಹಾಸನ ಮೆಗಾ ಡೈರಿ ಸ್ಥಾಪನೆಗೆ ಸಿದ್ದತೆ ನಡೆದಿದೆ ಎಂದು ತಿಳಿಸಿದರು.
ಸಮಾಜ ಸೇವಕಿ ವಾಣಿ ಶ್ರೀನಿವಾಸ್ ಮಾತನಾಡಿ, ಎಸ್.ಎಲ್ ಧರ್ಮೇಗೌಡರು ತಮ್ಮ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ 130ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಂಘಗಳನ್ನು ಸ್ಥಾಪಿಸಿ ಎಲ್ಲ ಗ್ರಾಮಗಳ ಹೈನುಗಾರರಿಗೂ ಅನುಕೂಲ ಕಲ್ಪಿಸಿದ್ದರು. ಅವರಂತೆ ಅವರ ಪುತ್ರ ಎಸ್.ವಿ.ಸೋನಾಲ್ ಗೌಡರೂ ಸಹಕಾರ ಕ್ಷೇತ್ರದಲ್ಲಿ ಉನ್ನತಸ್ಥಾನ ಗಳಿಸುವ ಮೂಲಕ ಚಿಕ್ಕಮಗಳೂರು ಜಿಲ್ಲೆ ಗೆ ಹಾಸನ ಹಾಲು ಒಕ್ಕೂಟದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಿ ಎಂದು ಹೇಳಿದರು.
ತರೀಕೆರೆ ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ರವಿ, ತಿಗಡ ಗ್ರಾಪಂ ಸದಸ್ಯ ತಣಿಗೆಬೈಲು ರಮೇಶ್ ಗೋವಿಂದೇಗೌಡ, ತಣಿಗೆಬೈಲು ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷೆ ಸುಶೀಲಮ್ಮ ಹನುಮಂತಪ್ಪ, ತಿಗಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸತೀಶ್, ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಅಬುಬಕರ್ ಕುಟ್ಟಿ, ಬಗರ್‌ಹುಕುಂ ಸಮಿತಿ ಸದಸ್ಯ ಮಹಮ್ಮದ್‌ಅಕ್ಬರ್, ಎನ್.ಜೆ. ಭದ್ರೇಗೌಡ, ರಾಮಪ್ಪ, ಅಬ್ದುಲ್ ರೆಹಮಾನ್, ಆರ್.ರಾಮಯ್ಯ, ಎನ್.ಎ ಕೃಷ್ಣನಾಯ್ಕ, ನಾಗರಾಜನಾಯ್ಕ, ದೊಡ್ಡಮಲ್ಲಯ್ಯ, ಹನುಮಂತಪ್ಪ ಹಾಜರಿದ್ದರು.