ಕೌಶಲ ಅರಿತವರು ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲಲು ಸಾಧ್ಯ

10
Published on


ಮೈಸೂರು:
ಇಂದಿನ ಕಾಲದಲ್ಲಿ ಎಲ್ಲರಿಗೂ ತಾಂತ್ರಿಕ ಜ್ಞಾನ, ಶಿಕ್ಷಣ ಇದ್ದೇ ಇರುತ್ತದೆ. ಆದರೆ, ಎಷ್ಟೋ ಜನರಿಗೆ ಸಾಫ್ಟ್ ಸ್ಕಿಲ್ಸ್, ಪ್ರಪಂಚ ಜ್ಞಾನ, ವಾಸ್ತವ ಸ್ಥಿತಿ ಬಗ್ಗೆ ತಿಳಿದಿರುವುದಿಲ್ಲ. ಇಂತಹ ಕೌಶಲಗಳನ್ನು ತಿಳಿದುಕೊಳ್ಳುವುದರಿಂದ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲಲು ಸಾಧ್ಯ ಎಂದು ಉದ್ಯಮಿ ಅರ್ಜುನ್ ರಂಗ ಅಭಿಪ್ರಾಯಪಟ್ಟರು.


ನಗರದ ಒಡೆಯರ್ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನಲ್ಲಿ ಆಯೋಜಿಸಿದ್ದ ಡಾ.ಧರ್ಮಪ್ರಸಾದ್ ಅವರು ಬರೆದಿರುವ ‘ಎಂದಿಗೂ ಹಿಂದುಳಿಯಬೇಡಿ’, ‘Don't Get Left Behind’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಇಂದಿನ ಯುಗದಲ್ಲಿ ಒಬ್ಬರಿಗಿಂತ ಒಬ್ಬರು ವಿಶೇಷ ಕೌಶಲಗಳನ್ನು ಹೊಂದಿರುತ್ತಾರೆ. ಈ ಪರಿಸ್ಥಿತಿಯಲ್ಲಿ ಗೆಲುವು ಸಾಧಿಸಬೇಕೆಂದರೆ ಉತ್ತಮ ವಾಸ್ತವಿಕ ಜ್ಞಾನ ಸಂಪಾದಿಸುವುದು ಅವಶ್ಯ. ಶಿಕ್ಷಣದೊಂದಿಗೆ ವಿವಿಧ ಕೌಶಲಗಳನ್ನು ಹೊಂದುವುದು ಎಷ್ಟು ಮುಖ್ಯ? ಅದರಿಂದ ಆಗುವ ಪ್ರಯೋಜನಗಳು ಏನು? ಆ ಕೌಶಲಗಳನ್ನು ರೂಢಿಸಿಕೊಳ್ಳುವುದು ಹೇಗೆ? ಅವು ಯಾವುವು? ಎಂಬುದರ ಬಗ್ಗೆ ಈ ಪುಸ್ತಕ ತಿಳಿಸುತ್ತದೆ ಎಂದರು.

ಈಗಿನ ಪ್ರಪಂಚದಲ್ಲಿ ಕೃತಕ ಬುದ್ಧಿಮತ್ತೆ ನಮ್ಮೆಲ್ಲರ ಕೆಲಸವನ್ನು ಮಾಡುತ್ತಿದೆ. ಅದಕ್ಕಿಂತ ಭಿನ್ನವಾಗಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕು ಎಂದರೆ ಇಂತಹ ಕೌಶಲಗಳನ್ನು ರೂಢಿಸಿಕೊಳ್ಳುವುದು ಅವಶ್ಯ. ಯುವಜನತೆ ಮುಖ್ಯವಾಗಿ ವಿದ್ಯಾರ್ಥಿಗಳು ಈ ಪುಸ್ತಕವನ್ನು ತಪ್ಪದೆ ಓದಬೇಕು ಎಂದು ಸಲಹೆ ನೀಡಿದರು.


ಜೆ.ಕೆ.ಟಯರ್ಸ್‌ನ ಉಪಾಧ್ಯಕ್ಷ ಈಶ್ವರ್‌ರಾವ್ ಮಾತನಾಡಿ, ಡಾ.ಧರ್ಮಪ್ರಸಾದ್ ಅವರು ಬರೆದಿರುವ ಈ ಪುಸ್ತಕ ಇಂದಿನ ಪೀಳಿಗೆಗೆ ಅತ್ಯಂತ ಅವಶ್ಯವಾದುದು. ಈ ಪುಸ್ತಕದಲ್ಲಿ ಇಂತಹ ಏಳು ಕೌಶಲಗಳ ಬಗ್ಗೆ ತಿಳಿಸಲಾಗಿದೆ. ಸೂಕ್ತ ಉದಾಹರಣೆಗಳು, ಸರಳ ಭಾಷೆ ಹಾಗೂ ಉತ್ತಮ ರೀತಿಯ ಬರವಣಿಗೆಯಿಂದ ಈ ಪುಸ್ತಕ ಎಲ್ಲರಿಗೂ ಉಪಯೋಗವಾಗುತ್ತದೆ. ಇಂದಿನ ದಿನಗಳಲ್ಲಿ ಅತ್ಯಂತ ಮುಖ್ಯವಾಗಿ ಬೇಕಾಗುವ ಡಿಜಿಟಲ್ ಲಿಟರಸಿ ಸ್ಕಿಲ್ (ತಾಂತ್ರಿಕ ಸಾಕ್ಷರತೆ), ಭಾವನಾತ್ಮಕ ಬುದ್ಧಿವಂತಿಕೆ, ನಾಯಕತ್ವ ಕೌಶಲದಂತಹ ಅತ್ಯಂತ ವಾಸ್ತವಿಕ ಹಾಗೂ ಅವಶ್ಯ ಕೌಶಲಗಳ ಪ್ರಾಮುಖ್ಯತೆಯನ್ನು ಕಥೆಗಳ ಮೂಲಕ ತಿಳಿಸಿಕೊಡುವ, ವಿದ್ಯಾರ್ಥಿಗಳಿಗೆ ಬಹಳ ಸಹಾಯವಾಗುವ ರೀತಿಯ ಪುಸ್ತಕವನ್ನು ಬರೆದಿದ್ದಾರೆ. ಇದು ಇಂದಿನ ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ ಎಂದು ಹೇಳಿದರು.

ಮಹಾಜನ ಕಾಲೇಜಿನ ಸಿಇಒ ಪ್ರೊ.ಎಸ್.ಆರ್.ರಮೇಶ್ ಮಾತನಾಡಿ, ಪ್ರತಿ ಕಾಲೇಜಿನಲ್ಲಿ, ಶಾಲೆಯಲ್ಲಿ ಇರಲೇಬೇಕಾದ ಅತ್ಯುತ್ತಮ ಪುಸ್ತಕ ಇದು. ಇದರಲ್ಲಿರುವ ಅಂಶಗಳನ್ನೆಲ್ಲ ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳ ವೃತ್ತಿ ಜೀವನ ಖಂಡಿತವಾಗಿಯೂ ಉತ್ತಮಗೊಳ್ಳುತ್ತದೆ. ಕನ್ನಡದಲ್ಲಿ ಇಂತಹ ಪುಸ್ತಕ ಬಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಲೇಖಕ ಡಾ.ಧರ್ಮಪ್ರಸಾದ್ ಮಾತನಾಡಿ, ನಾನು ಬಹಳ ಕಷ್ಟದ ದಿನಗಳನ್ನು ನೋಡಿ ಬಂದಿರುವವನು. ನಮ್ಮ ಕುಟುಂಬ ಆರ್ಥಿಕವಾಗಿ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ನಮ್ಮ ತಂದೆ-ತಾಯಿ ಬಹಳ ಕಷ್ಟಪಟ್ಟು ನಮ್ಮನ್ನು ಬೆಳೆಸಿದರು. ನಮಗೆ ಶಿಕ್ಷಣ ಕೊಡುವುದು ಅವರ ಏಕಮಾತ್ರ ಗುರಿಯಾಗಿತ್ತು. ಈಗಿನಂತೆ ಆಗ ತಂತ್ರಜ್ಞಾನ ಮುಂದುವರಿದಿರಲಿಲ್ಲ. ಶಿಕ್ಷಕರ ಮಗನಾದ ನಾನು ಶಾಲಾ ದಿನಗಳಲ್ಲಿ ಅಷ್ಟೇನೂ ಚೆನ್ನಾಗಿ ಓದುತ್ತಿರಲಿಲ್ಲ. ಆದರೆ ವರ್ಷಗಳು ಕಳೆದಂತೆ ಶಿಕ್ಷಣದ ಪ್ರಾಮುಖ್ಯತೆ ತಿಳಿದು ಓದಲು ಆರಂಭಿಸಿದೆ. ಆಸಕ್ತಿಯಿಂದ ಓದಿದ ಕಾರಣ ಅತ್ಯುತ್ತಮ ಫಲಿತಾಂಶಗಳನ್ನೂ ಪಡೆದೆ. ಈ ದಾರಿಯಲ್ಲಿ ನನ್ನ ತಂದೆ-ತಾಯಿ, ಗುರುಗಳು ಎಲ್ಲರ ಮಾರ್ಗದರ್ಶನ ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಪಾಲಕರೇ ನನ್ನ ಮೊದಲ ಗುರುಗಳು. ನಾನು ಚಾಟ್ ಜಿಪಿಟಿ ಸಹಾಯದಿಂದ ಈ ಪುಸ್ತಕ ಬರೆದಿದ್ದೇನೆ. ಇದನ್ನು ನೋಡಿದರೆ ಕೃತಕ ಬುದ್ಧಿಮತ್ತೆಯ ಅಗಾಧ ಆಳ-ಅಗಲವನ್ನು ಊಹಿಸಬಹುದು ಎಂದರು.


ಸಿಐಐ ಮೈಸೂರಿನ ಚೇರ‌್ಮನ್ ಹಾಗೂ ಶೆವರನ್ ಲ್ಯಾಬೊರೇಟರೀಸ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಶ್ಯಾಮ್ ಚೆರಿಯನ್, ಎಸ್‌ಡಿಎಂಐಎಂಡಿ ನಿರ್ದೇಶಕ ಡಾ.ಎಸ್.ಎನ್.ಪ್ರಸಾದ್, ಎನ್‌ಐಇ ಕಾಲೇಜಿನ ಪ್ರಾಂಶುಪಾಲರಾದ ರೋಹಿಣಿ ನಾಗಪದ್ಮಾ, ಕ್ರೈಸ್ಟ್ ಕಾಲೇಜಿನ ಪ್ರಾಂಶುಪಾಲ ಜಿಂಟೋ ಜೋಸ್, ಟೆರೇಷಿಯನ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿ.ಜಯಂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net