

ಜೊಯಿಡಾ: ಹಳೆಯ ಅತಿಕ್ರಮಣ ಮಾಡಿಕೊಂಡವರ ಸುದ್ದಿಗೆ ಹೋಗಬೇಡಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜೊಯಿಡಾ ಸರ್ಕಾರಿ ಪದವಿ ಕಾಲೇಜ್ನಲ್ಲಿ ಸೋಮವಾರ ಕರೆಯಲಾಗಿದ್ದ ತಾಲೂಕು ಪಂಚಾಯಿತಿ ತ್ರೖೆಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಅರಣ್ಯ ಅತಿಕ್ರಮಣ ಮಂಜೂರಾಗಬೇಕಾದರೆ ಮೂರು ತಲೆಮಾರುಗಳಷ್ಟು ಕಾಲ ಆಸ್ಥಳದಲ್ಲಿ ಜೀವನ ನಡೆಸಿದ ಕುರಿತು ಎರಡು ದಾಖಲೆ ನೀಡಬೇಕಿತ್ತು. ಇದರಲ್ಲಿ ಒಂದು ದಾಖಲೆ ಕೊಡಿಸುವ ಕಾರ್ಯ ಮಾಡಲಾಗಿದೆ. ಎರಡನೇ ದಾಖಲೆ ನೀಡುವುದು ಕಷ್ಟ ಇದ್ದು, ಈ ಕಾನೂನು ತಿದ್ದುಪಡಿ ಮಾಡಿ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಕಾಳುಹಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. 1978 ಏಪ್ರಿಲ್ 27ಕ್ಕಿಂತ ಮುಂಚೆ ಮಾಡಿಕೊಂಡಿರುವ ಅರಣ್ಯ ಅತಿಕ್ರಮಣವನ್ನು ತೆಗೆಯುವಂತಿಲ್ಲ ಎಂಬ ಆದೇಶವಿದೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಳೆಯ ಅತಿಕ್ರಮಣ ಮಾಡಿಕೊಂಡವರ ಸುದ್ದಿಗೆ ಹೋಗಬಾರದು ಎಂದು ಖಡಕ್ಕಾಗಿ ಸೂಚಿಸಿದರು.
ಶಾಲೆ ಮತ್ತು ಯಾವುದೇ ಸರ್ಕಾರಿ ಕಟ್ಟಡ ಸಂಪೂರ್ಣವಾಗಿ ಹಾನಿಗೊಂಡು ಬೀಳುವ ಸ್ಥಿತಿಯಲ್ಲಿದ್ದರೆ ತಹಸೀಲ್ದಾರ್, ಇಒ ಮತ್ತು ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒಂದು ತಿಂಗಳೊಳಗಾಗಿ ವರದಿ ನೀಡಬೇಕು. ಶಿಥಿಲಗೊಂಡ, ಹಾನಿಗೀಡಾದ ಕಟ್ಟಡಗಳು ಬಿದ್ದು ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಆದಷ್ಟು ಶೀಘ್ರ ವರದಿ ನೀಡಬೇಕು ಎಂದು ಸೂಚಿಸಿದರು.
ಬಿಇಒ ಬಶೀರ್ ಅಹ್ಮದ್ ಶೇಖ್ ಮಾತನಾಡಿ, ಪ್ರಾಥಮಿಕ ಶಾಲೆಗಳಿಗೆ 158 ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಆಗ ಶಾಸಕರು, ಬೆಂಚ್ ಇಲ್ಲದೆ ನೆಲದ ಮೇಲೆ ಮಕ್ಕಳು ಕುಳಿತುಕೊಳ್ಳುತ್ತಿದ್ದರೆ ಆ ಮಾಹಿತಿ ನೀಡಿ. ಯಾವೊಂದು ಮಗುವೂ ನೆಲದ ಮೇಲೆ ಕುಳಿತುಕೊಳ್ಳಬಾರದು. ತಿಂಗಳೊಳಗೆ ಆಯಾ ಶಾಲೆಯಲ್ಲಿರುವ ಮಕ್ಕಳು ಹಾಗೂ ಕೊರತೆ ಇರುವ ಬೆಂಚ್ಗಳ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಪಿಎಂಜಿಎಸ್ವೈ ಯೋಜನೆಯ ಎರಡು ಕಾಮಗಾರಿ ಅರ್ಧಕ್ಕೆ ಬಿಟ್ಟಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿವೆ. ಈ ಎರಡು ಕಾಮಗಾರಿಯನ್ನು ಪೂರ್ಣಗೊಳಿಸದೆ ಬಿಟ್ಟಿರುವ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಲು ಪ್ರಸ್ತಾವನೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಡಿಗ್ಗಿ, ಕ್ಯಾಸಲರಾಕ್, ಕುಂಬಾರವಾಡಾ, ಗುಂದ, ರಾಮನಗರದಲ್ಲಿ ಆಶಾ ಕಾರ್ಯಕರ್ತೆಯರು ಇಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಸುಜಾತಾ ಉಕ್ಕಲಿ ಸಭೆಗೆ ಮಾಹಿತಿ ನೀಡಿದರು. ಆಗ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆಗಿರುವ ಆರ್.ವಿ. ದೇಶಪಾಂಡೆಯವರು, 15 ದಿನದಲ್ಲಿ ಇಲ್ಲಿ ನೇಮಕ ಮಾಡಿಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ನಂತರ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್ಗಳನ್ನು ವಿತರಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ಮೂವರು ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಕೊಡಲಾಗುವ ಲ್ಯಾಪ್ಟಾಪ್ ವಿತರಿಸಿದರು. ಕೆಡಿಪಿ ನಾಮನಿರ್ದೇಶಿತ ಸದಸ್ಯ ವಿನಯ ದೇಸಾಯಿ, ಸಂಜಯ ಹಣಬರ, ಸದಾನಂದ ದಬಗಾರ, ಜೊಯಿಡಾ ತಹಸೀಲ್ದಾರ್ ಮಂಜುನಾಥ ಮುನ್ನೋಳಿ, ಇಒ ಆನಂದ ಬಡಕುಂದ್ರಿ, ಇತರರು ಉಪಸ್ಥಿತರಿದ್ದರು.