ಗ್ಯಾರಂಟಿ ಜಾರಿ ವಿಷಯದಲ್ಲಿ ಗೊಂದಲ ಬೇಡ

27 ylp 05 RVD
Published on

ಯಲ್ಲಾಪುರ: ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿದ ನಂತರ ಅದನ್ನು ಜಾರಿಗೆ ತರುವುದು ನಮ್ಮ ಕರ್ತವ್ಯ. ಈ ಕುರಿತು ಯಾವ ಗೊಂದಲಗಳು ಬೇಡ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಪಟ್ಟಣದ ಅರಣ್ಯ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿದ ನಂತರ ಮಾತನಾಡಿದರ ಅವರು, ಯೋಜನೆಗಳ ಜಾರಿಯಲ್ಲಿ ಒಂದಷ್ಟು ತೊಡಕುಗಳು ಎದುರಾದರೂ, ಅದನ್ನು ಸರಿಪಡಿಸಿಕೊಂಡು ಅನುಷ್ಠಾನಕ್ಕೆ ತರಲಿದ್ದೇವೆ ಎಂದರು.

ಎರಡು ವರ್ಷಗಳ ಹಿಂದೆ ಕಳಚೆಯಲ್ಲಿ ಭೂಕುಸಿತದಿಂದ ಸಂತ್ರಸ್ತರಾದವರಿಗೆ ಈವರೆಗೂ ಪರ್ಯಾಯ ವ್ಯವಸ್ಥೆ ಆಗಿಲ್ಲ. ಸ್ವತಃ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಸ್ಥಳಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿದರೂ ಜನರ ಬವಣೆ ತಪ್ಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ದೇಶಪಾಂಡೆ, ಹಿಂದೆ ತಾವು ಸಚಿವರಾಗಿದ್ದ ಸಂದರ್ಭದಲ್ಲಿ ಕೊಡಸಳ್ಳಿ ನಿರಾಶ್ರಿತರಿಗೆ ಹೆಗ್ಗಾರ ಭಾಗದಲ್ಲಿ ವ್ಯವಸ್ಥಿತವಾಗಿ ಪುನರ್ವಸತಿ ಕಲ್ಪಿಸಿದ್ದನ್ನು ಸ್ಮರಿಸಿದರು. ಅದೇ ಮಾದರಿಯಲ್ಲಿ ಕಳಚೆಯ ಗ್ರಾಮಸ್ಥರಿಗೂ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವ ಭರವಸೆ ನೀಡಿದರು.

ಈಶ್ವರಪ್ಪಗೆ ಜ್ಞಾನೋದಯ ಆಗೋಕೆ ತಡ ಆಯ್ತು!: ಕಾಂಗ್ರೆಸ್‌ನಿಂದ ಬಿಜೆಪಿಗೆ ಶಾಸಕರು ವಲಸೆ ಬಂದ ನಂತರ ಬಿಜೆಪಿಯಲ್ಲಿ ಅಶಿಸ್ತು ಹೆಚ್ಚಿದೆ ಎಂಬ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್.ವಿ.ಡಿ, ಈಶ್ವರಪ್ಪನವರಂತಹ ಬುದ್ಧಿವಂತರಿಗೂ ಜ್ಞಾನೋದಯ ಆಗುವುದಕ್ಕೆ ಇಷ್ಟು ತಡ ಆಯ್ತು ಎಂದು ವ್ಯಂಗ್ಯವಾಡಿದರು. ಬಿಜೆಪಿಗೆ ಬಂದ ಶಾಸಕರು, ಸಚಿವರಾಗಿ ಅಧಿಕಾರ ಅನುಭವಿಸಿ, ಸೋತ ನಂತರ ಈ ವಿಷಯ ಅರ್ಥವಾಯಿತೇ ಎಂದು ಪ್ರಶ್ನಿಸಿದರು.

ಅಜ್ಜಿಗೆ ಮೀಸೆ ಇದ್ದರೆ ಹೇಗೆ ಕಾಣಬಹುದು?: ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ವಲಸೆ ಹೋಗಿ, ಸಚಿವರಾಗಿದ್ದ ನಾಯಕರು ಮರಳಿ ಕಾಂಗ್ರೆಸ್ ಬಾಗಿಲು ತಟ್ಟಿದರೆ ಅವರನ್ನು ಕಾಂಗ್ರೆಸ್ ಸ್ವಾಗತಿಸುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ದೇಶಪಾಂಡೆ, ಅಜ್ಜಿಗೆ ಮೀಸೆ ಇದ್ದರೆ ಹೇಗೆ ಕಾಣಬಹುದು ಎಂದು ಕೇಳಿದ ಹಾಗಾಯ್ತು. ಅವರು ಮರಳಿ ಕಾಂಗ್ರೆಸ್‌ಗೆ ಬರುವ ಪ್ರಸ್ತಾಪವೇ ಇಲ್ಲ. ಈ ವಿಷಯ ಈಗ ಅಪ್ರಸ್ತುತ ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವ್ಕರ, ಪ್ರಮುಖರಾದ ಶ್ರೀನಿವಾಸ ಭಟ್ಟ ಧಾತ್ರಿ, ಎನ್.ಕೆ. ಭಟ್ಟ ಮೆಣಸುಪಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net