

ಮೈಸೂರು: ಸ್ವಾತಂತ್ರ್ಯಕ್ಕಾಗಿ ಹಾಗೂ ನಾಡಿನ ರಕ್ಷಣೆಗಾಗಿ ಬಲಿದಾನ ಮಾಡಿದಂತಹ ಮಹಾನ್ ವ್ಯಕ್ತಿಗಳನ್ನು ಜನರು ಮರೆಯುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ವಿಷಾದಿಸಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಏಳಿಗೆಗೆ, ಸ್ವಾತಂತ್ರ್ಯಕ್ಕಾಗಿ ಹಾಗೂ ನಾಡಿನ ರಕ್ಷಣೆಗಾಗಿ ಪ್ರಾಣವನ್ನೇ ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳು ನಮ್ಮಲ್ಲಿ ಇದ್ದಾರೆ. ಆದರೆ ಅವರ ಜೀವನ ಚರಿತ್ರೆ, ಇತಿಹಾಸ ಇಂದಿನ ಯುವ ಜನಾಂಗಕ್ಕೆ ತಿಳಿಯುತ್ತಿಲ್ಲ ಎಂದು ವಿಷಾದಿಸಿದರು.
ಪ್ರಸ್ತುತ ಕಾಲಮಾನದಲ್ಲಿ ಇತಿಹಾಸವನ್ನು ತಿಳಿದುಕೊಳ್ಳವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಕಿತ್ತೂರು ಚನ್ನಮ್ಮ ಸೇರಿದಂತೆ ಅನೇಕ ಮಹಿಳೆಯರು ಪುರುಷರಂತೆಯೇ ಹೋರಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಇಂಥವರನ್ನು ನಾವು ಸ್ಮರಿಸಿಕೊಳ್ಳುವ ಮೂಲಕ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಸಾಹಿತಿ ಡಾ. ಪ್ರದೀಪ್‌ಕುಮಾರ್ ಹೆಬ್ರಿ ಮಾತನಾಡಿ, ನಮ್ಮ ದೇಶ, ಭಾಷೆ ಬಗ್ಗೆ ಪ್ರಾಮಾಣಿಕತೆ ಹಾಗೂ ಛಲವನ್ನು ನಾವು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುದು ಮುಖ್ಯ. ಈ ನಾಡು ಅನ್ಯರ ಪಾಲಾಗದೆ ನಮಗೇ ಉಳಿಯಬೇಕೆಂಬ ದಿಟ್ಟ ಕನಸನ್ನು ಇಟ್ಟುಕೊಂಡು ಹೋರಾಟ ನಡೆಸಿದ ವೀರ ಮಹಿಳೆ ಕಿತ್ತೂರು ಚನ್ನಮ್ಮ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದಳು. ಆಕೆಯ ಬದುಕು, ಹೋರಾಟ ಅನನ್ಯ. ಅವಳ ದೇಶಪ್ರೇಮ ಎಲ್ಲರಿಗೂ ಮಾದರಿ ಎಂದು ಬಣ್ಣಿಸಿದರು. ನಾಡಿನ ಜನರನ್ನು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಹುರಿದುಂಬಿಸಿ, ಕನ್ನಡಿಗರ ಪೌರುಷ, ಸಾಹಸ, ಸ್ವಾಭಿಮಾನವನ್ನು ಹೋರಾಟದ ಮೂಲಕ ತೋರ್ಪಡಿಸಿ, ರಾಜ್ಯದ ಉಳಿವಿಗೆ ಪ್ರಾಣವನ್ನೇ ಒತ್ತೆ ಇಟ್ಟ ಧೀರ ಮಹಿಳೆ. ಆಕೆಯ ಆಪ್ತರು ಮಾಡಿದ ಕುತಂತ್ರದ ಫಲವಾಗಿ ಚೆನ್ನಮ್ಮ ಬಲಿಯಾಗಿದ್ದು ವಿಷಾದ ಎಂದರು.
ಈ ದೇಶಕ್ಕೆ ಯಾರೆಲ್ಲ ಮಹನೀಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೋ ಅವರನ್ನು ನಾವು ಸ್ಮರಿಸಬೇಕು. ಪ್ರತಿ ಮನೆಯಲ್ಲೂ ರಾಣಿ ಚನ್ನಮ್ಮನಂತಹ ಧೀರ ಹೆಣ್ಣುಮಕ್ಕಳು ಜನಿಸಬೇಕು ಎಂಬ ಆಶಯವನ್ನು ಡಾ. ಪ್ರದೀಪ್‌ಕುಮಾರ್ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ನಾಡಿನ ಇತಿಹಾಸವನ್ನು ನೆನಪಿಸಿಕೊಳ್ಳುವ ಸಂದರ್ಭ ರಾಣಿ ಚನ್ನಮ್ಮ ಅಪ್ರತಿಮ ಹೋರಾಟಗಾರ್ತಿಯಾಗಿ ಕಾಣುತ್ತಾಳೆ. ನಾಡಿನ ಮಹಿಳಾ ಮಣಿಗಳು ದೇಶ ಭಕ್ತಿಯ ಕಿಚ್ಚನ್ನು 128 ವರ್ಷದ ಮೊದಲೇ ಹಚ್ಚಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಮಹಿಳೆಯೊಬ್ಬಳು ಸವಾಲನ್ನು ಹೇಗೆ ಸ್ವೀಕಾರ ಮಾಡಬೇಕು ಎಂಬುದಕ್ಕೆ ಚನ್ನಮ್ಮ ಸ್ಫೂರ್ತಿ. ಈಕೆ ಒಂದು ಶಕ್ತಿ ಪ್ರತೀಕ ಎಂದರು.
ಬಸವ ಜ್ಞಾನ ಮಂದಿರದ ಅಧ್ಯಕ್ಷೆ ಡಾ.ಮಾತೆ ಬಸವಾಂಜಲಿ ದೇವಿ ಮಾತನಾಡಿ, ನಾರಿಯರ ಶಕ್ತಿ ಅಪಾರ. ಅದು ಅಡಗಿ ಹೋಗಬಾರದು. ಅವಕಾಶ ಬಳಸಿಕೊಳ್ಳಬೇಕು. ಮಹಿಳೆಯರು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಕಷ್ಟು ಮಹಿಳೆಯರೂ ಭಾಗವಹಿಸಿದ ಇತಿಹಾಸ ಭಾರತಕ್ಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ. ಎಂ. ಡಿ ಸುದರ್ಶನ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಬಿ.ಎಸ್. ಸೋಮಶೇಖರ್ ಇತರರು ಇದ್ದರು.