

ಮಹಾಲಿಂಗಪುರ: ಕುಲ,ಕುಲ ಎಂದು ಹೊಡೆದಾಡದಿರಿ ಹುಚ್ಚಪ್ಪಗಳಿರಾ.. ನಿಮ್ಮ ಕುಲದ ನೆಲೆಯನ್ನು ಬಲ್ಲಿರಾ ಎಂದು ಸಾರಿದ ಕನಕದಾಸರು ಮೋಕ್ಷ ಸಿಗಬೇಕೆಂದರೆ ನಾನು ನನ್ನದು ಎಂಬ ಅಹಂ ತೊರೆದು ಸದಾಶಿವನ ದಾಸನಾಗಬೇಕೆಂದು ತಿಳಿಸಿದ್ದಾರೆ ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.
ಸ್ಥಳೀಯ ಪುರಸಭೆಯಲ್ಲಿ ಸೋಮವಾರ ಕನಕದಾಸ ಜಯಂತಿ ನಿಮಿತ್ತ ಕನಕನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಜ್ಞಾನಿಗಳೊಡನೆ ಅಧಿಕ ಸ್ನೇಹ ಮಾಡುವುದಕ್ಕಿಂತ ಸುಜ್ಞಾನಿಗಳ ಜೊತೆ ಜಗಳವಾಡುವುದು ಲೇಸು. ಬಡತನ ಬಂದಾಗ ನೆಂಟರ ಮನೆ ಬಾಗಿಲು ಸೇರಬಾರದು.ಬಟ್ಟೆ ನೀರೊಳಗೆ ಅದ್ದಿ ಒಣಗಿಸಿ ಉಟ್ಟುಕೊಂಡರೆ ಅದು ಮಡಿಯಲ್ಲ. ಹೊಟ್ಟೆಯೊಳಗಿನ ಕಾಮ,ಕ್ರೋಧಗಳನ್ನು ಬಿಟ್ಟು ನಿರ್ಮಲ ಮನಸ್ಸಿನಿಂದ ಮುನ್ನಡೆದರೆ ಅದುವೇ ಮಡಿ ಎಂಬುದು ದಾಸರ ಬೋಧನೆಯಾಗಿತ್ತು.ಅವರ ಜೀವನದ ಸಾರವನ್ನು ಅರಿತು ನಡೆಯಬೇಕು ಎಂದರು.
ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಬಲವಂತಗೌಡ ಪಾಟೀಲ, ಮುಸ್ತಾಕ ಚಿಕ್ಕೋಡಿ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ,ಮ್ಯಾನೇಜರ್ ಎಸ್.ಎನ್.ಪಾಟೀಲ, ಮಹಾಲಿಂಗ ಮುಗಳಖೋಡ, ಎಸ್.ಎಂ.ಕಲಬುರ್ಗಿ, ರಾಜು ಹೂಗಾರ, ಸಿದ್ದು ಅಳ್ಳಿಮಟ್ಟಿ, ಎಂ.ಕೆ.ದಳವಾಯಿ, ರವಿ ಹಲಸಪ್ಪಗೋಳ ಗಣ್ಯರಾದ ಮಹಾಲಿಂಗಪ್ಪ ಜಕ್ಕಣ್ಣವರ, ರಾಜು ಭಾವಿಕಟ್ಟಿ, ವಿಠ್ಠಲ ಸಂಶಿ, ಲಕ್ಷ್ಮಣ ಕಿಶೋರ ಮುಂತಾದವರು ಇದ್ದರು.