ರೈತರ ಬಗ್ಗೆ ಅಸಡ್ಡೆ ಭಾವನೆ ಬೇಡ

Don't feel indifferent towards farmers.
ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಜಿಎಫ್​ಜಿಆರ್​ ಕಾಲೇಜಿನಲ್ಲಿ ಆಯೋಜಿಸಿದ್ದ ರೈತ ದಿನಾಚರಣೆ, ರೈತ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಲಾಯಿತು. ಅರವಿಂದ ಕೊಪ್ಪ, ಡಾ. ಎಸ್.ಎಲ್. ಪಾಟೀಲ, ಕಾಶಿಬಾಯಿ ರಾಂಪೂರ, ರೇಣುಕಾ ಹಳ್ಳೂರ, ಸೋಮಲಿಂಗಪ್ಪ ಗಸ್ತಿಗಾರ ಇತರರಿದ್ದಾರೆ.
Published on

ಮುದ್ದೇಬಿಹಾಳ: ರೈತರ ಬಗ್ಗೆ ದೇಶದಲ್ಲಿ ಅಸಡ್ಡೆ ಭಾವನೆ ಹೆಚ್ಚುತ್ತಿದೆ. ಇದು ಹೀಗೆಯೇ ಮುಂದುವರೆದರೆ ದೇಶದ ಆಹಾರ ಚಕ್ರ ಕುಸಿದು ಬೀಳುವ ಆತಂಕ ಸೃಷ್ಟಿಯಾಗಬಹುದು. ಇದನ್ನು ತಡೆಯಲು ಸರ್ಕಾರ ಮುಂದಾಗಬೇಕು ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಚಿಂತಕ ಅರವಿಂದ ಕೊಪ್ಪ ಹೇಳಿದರು.

ಪಟ್ಟಣದ ಹಡಲಗೇರಿಯ ಮಾದರಿ ಎಸ್ಸಿ, ಎಸ್ಟಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ, ಕೃಷಿಗಾಗಿ ಯುವಕರು -ಯುವಕರಿಗಾಗಿ ಕೃಷಿ ಅಭಿಯಾನ ಹಾಗೂ ರೈತ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಲ್.ಪಾಟೀಲ ಅವರು ಮಾತನಾಡಿ, ಲಾಭಕ್ಕಾಗಿ ಕೃಷಿ ಚಿಂತನೆ ತಲ್ಲಣ ಸೃಷ್ಟಿಸುತ್ತಿದ್ದು ಇದನ್ನು ತಡೆಯುವ ಅವಶ್ಯಕತೆ ಇದೆ. ವೈಜ್ಞಾನಿಕ ತಳಹದಿಯ ಮೇಲೆ ಯುವಜನರನ್ನು ಕೃಷಿ ಕುರಿತು ಒಲವು ಮೂಡಿಸಲು ಈ ಅಭಿಯಾನವು ಉಪಯುಕ್ತವಾಗಿದೆ ಎಂದರು.

ಪ್ರಗತಿಪರ ರೈತರಾದ ಬಸನಗೌಡ ಬ್ಯಾಲ್ಯಾಳ (ನೇಬಗೇರಿ), ಅಲ್ಲೀಸಾಬ ಸುರಪೂರ (ಹಿರೇಮುರಾಳ), ಹುಚ್ಚೇಶ ಗೌಡರ (ಶಿರೋಳ), ಪರಸಪ್ಪ ಮೇಟಿ (ಜಟ್ಟಗಿ), ಗುಂಡಪ್ಪ ಬಿರಾದಾರ (ಅರಸನಾಳ), ತಿಮ್ಮಣ್ಣ ವಡ್ಡರ (ಆಲಕೊಪ್ಪರ) ಅವರಿಗೆ ಕೃಷಿ ವಿದ್ಯಾಪೀಠದ ರೈತ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾಶೀಬಾಯಿ ರಾಂಪೂರ ಅವರು ಮಾತನಾಡಿ, ಕೃತಕ ವ್ಯವಸ್ಥೆಗೆ ಜೋತು ಬಿದ್ದು ಮಕ್ಕಳಿಂದ ಕೃಷಿ ಕಸಿಯುವ ದುಸ್ಸಾಹಸ ತೋರುತ್ತಿದ್ದೇವೆ. ಬಾಲ್ಯದಿಂದಲೇ ಮಕ್ಕಳಿಗೆ ಕೃಷಿ ಪದ್ಧತಿ ಪರಿಚಯಿಸುವ ದೃಢ ನಿರ್ಧಾರ ಮಾಡಬೇಕು ಎಂದರು.

ಉದಯ ರಾಯಚೂರ ಮಾತನಾಡಿದರು. ಸೋಮಲಿಂಗಪ್ಪ ಗಸ್ತಿಗಾರ, ಬಸವರಾಜ ಕುಂಟೋಜಿ, ಗೋಲಪ್ಪ ಗಂಗನಗೌಡ್ರ ಮತ್ತಿತರರಿದ್ದರು.

ಅರುಣಾ ಬಿದರಿ ಸ್ವಾಗತಿಸಿದರು. ಪ್ರಾಧ್ಯಾಪಕ ರೇವಣಸಿದ್ದಪ್ಪ ಅಮನ್ನಿ ನಿರೂಪಿಸಿದರು ಹಾಗೂ ಶಿವಕುಮಾರ ಉಣ್ಣಿಭಾವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net