ಸಾಮಾಜಿಕ ಜಾಲತಾಣದ ವಂಚನೆಗೆ ಬಲಿಯಾಗದಿರಿ

10
Published on

ಮೈಸೂರು: ಸಾಮಾಜಿಕ ಜಾಲತಾಣದ ಮೂಲಕ ವ್ಯವಹರಿಸುವವರು ಎಚ್ಚರ ವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ಸಲಹೆ ನೀಡಿದರು.

ನಗರದ ಜೆಎಲ್‌ಬಿ ರಸ್ತೆಯ ಇಂಜಿನಿಯರ್ಸ್‌ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಮತ್ತು ಅಂಗವಿಕಲನಿಗೆ ಗಾಲಿ ಕುರ್ಚಿ ವಿತರಣೆ, ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆನ್‌ಲೈನ್ ವಂಚನೆಗಳು ದಿನೇ ದಿನೆ ಹೆಚ್ಚುತ್ತಿದ್ದು, ಅವರ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದರು.

ಸಾಮಾಜಿಕ ಜಾಲತಾಣದ ಮೂಲಕ ವಂಚಕರು ಹಣ ಮಾಡುವ ಆಮಿಷ ಒಡ್ಡುತ್ತಾರೆ. ಪೊಲೀಸ್ ಇಲಾಖೆಯ ಅಂಕಿ-ಅಂಶಗಳ ಪ್ರಕಾರವೇ ಅಂತಹ ಜಾಹಿರಾತುಗಳನ್ನು ನಂಬಿ ರಾಜ್ಯದಲ್ಲಿ ವಾರ್ಷಿಕ 365 ಕೋಟಿ ರೂ. ವಂಚಕರ ಪಾಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜತೆಗೆ ವೈವಾಹಿಕ ಜೀವನದ ಸಮಸ್ಯೆಗಳು ನ್ಯಾಯಾಲಯದ ಮೆಟ್ಟಲೇರುವುದು ಹೆಚ್ಚಾಗುತ್ತಿದೆ. ಸಣ್ಣಪುಟ್ಟ ಸಮಸ್ಯೆಗೂ ದಂಪತಿ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಆದಾಯಕ್ಕೆ ತಕ್ಕಂತೆ ಜೀವನ ನಡೆಸಿದಲ್ಲಿ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳಿದರು.
ವಿವಾಹಿತ ಮಹಿಳೆ ಗಂಡನ ಮನೆಯಲ್ಲಿ ದೌರ್ಜನ್ಯಕ್ಕೆ ಒಳಗಾಗುವುದನ್ನು ಕಾನೂನು ಒಪ್ಪುವುದಿಲ್ಲ. ಅಂತಹವರು ಕಾನೂನಿನ ಮೊರೆ ಹೋಗಬಹುದು. ಅಂತಹವರಿಗೆ ಕಾನೂನು ಸೇವಾ ಪ್ರಾಧಿಕಾರ ಉಚಿತ ಕಾನೂನು ನೆರವು ಒದಗಿಸುತ್ತದೆ ಎಂದು ಹೇಳಿದರು.

ಸಮಿತಿ ಅಧ್ಯಕ್ಷೆ ವಿ.ಪಿ.ಸುಶೀಲಾ, ಕರಾಟೆ ಪಟು ಎಂ.ಕಿರಣ್, ಉದ್ಯಮಿ ಸಿ.ಬಿ.ಜಯಲಕ್ಷ್ಮೀ, ಮುಖಂಡರಾದ ರವಿ ಮಾವಿನಹಳ್ಳಿ, ಚಾಮರಾಜು, ಅಮೀನಾ ಬೇಗಂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net