

ಮಡಿಕೇರಿ: ವಿಧಾನಸಭಾ ಚುನಾವಣೆಯ ಹಿನ್ನೆಲೆ ಸ್ಪರ್ಧಿಗಳು ಒಡ್ಡುವ ಆಮಿಷಗಳಿಗೆ ಬಲಿಯಾಗದೆ ಯೋಗ್ಯರಿಗೆ ಮತ ನೀಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವಂತೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಎನ್.ಯೋಗೇಶ್ ಕುಮಾರ್ ಮನವಿ ಮಾಡಿದರು.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚುನಾವಣೆ ಬಂದ ಸಂದರ್ಭ ದುರ್ಬಲರು, ಅನಕ್ಷರಸ್ಥರು, ಕಡು ಬಡವರು ಹಾಗೂ ಅಮಾಯಕರ ಮತಗಳನ್ನು ಹಣದಿಂದ ಅಳೆಯಲಾಗುತ್ತದೆ. ಮತ ಖರೀದಿಯ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು ನೊಂದವರ ಸಮಸ್ಯೆಗಳಿಗೆ ಸ್ಪಂದಿಸದೆ ಕಡೆಗಣಿಸುತ್ತಾರೆ. ಆದ್ದರಿಂದ ಪ್ರತಿಯೊಬ್ಬ ಮತದಾರ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚುನಾವಣೆ ಸಂದರ್ಭ ರಾಜಕಾರಣಿಗಳಿಗೆ ಪ್ರಜೆಗಳೇ ಪ್ರಭುಗಳಾಗುತ್ತಾರೆ. ಇಲ್ಲದ ಆಮಿಷಗಳನ್ನೊಡ್ಡಿ ಹಾದಿ ತಪ್ಪಿಸುತ್ತಾರೆ. ಇದರಿಂದ ಪ್ರಶ್ನೆ ಮಾಡುವ ಹಕ್ಕನ್ನೇ ಕಳೆದುಕೊಳ್ಳುವ ಮತದಾರ ಅಭಿವೃದ್ಧಿ ಶೂನ್ಯ ಆಡಳಿತದಿಂದ ಪರಿತಪಿಸಬೇಕಾಗುತ್ತದೆ. ಸಮಸ್ಯೆಗಳಿದೆ ಎಂದು ಗೆದ್ದವರ ಬಳಿ ಜನ ಹೋದರೆ ಹಣ ನೀಡಿ ಗೆದ್ದಿದ್ದೇನೆ ಎನ್ನುವ ಅಹಂ ಪ್ರದರ್ಶಿಸುತ್ತಾರೆ. ಒಂದು ನಿಮಿಷ ಮಾಡುವ ತಪ್ಪಿನಿಂದ ಇಡೀ ಐದು ವರ್ಷ ಕೊರತೆಗಳ ನಡುವೆ ನೋವು ಅನುಭವಿಸಬೇಕಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಜಾತಿ ಆಧಾರದಲ್ಲಿ ಮತಗಳನ್ನು ಸೆಳೆಯುವ ಮತ್ತು ವಿಭಜಿಸುವ ಕಾರ್ಯಗಳಾಗುತ್ತದೆ. ಗೆಲುವಿಗಾಗಿ ಹಣ ಹಾಗೂ ಮದ್ಯದ ಹೊಳೆ ಹರಿಯುತ್ತದೆ. ಆಣೆ, ಪ್ರಮಾಣಗಳ ತಂತ್ರಗಾರಿಕೆ ನಡೆಯುತ್ತದೆ. ಒಂದು ಕ್ಷಣ ಇದೆಲ್ಲದಕ್ಕೂ ಮರುಳಾದರೆ ನಿಮ್ಮ ಕ್ಷೇತ್ರ ಐದು ವರ್ಷ ಅನಾತವಾಗುತ್ತದೆ ಎನ್ನುವುದನ್ನು ಮತದಾರ ಮನವರಿಗೆ ಮಾಡಿಕೊಳ್ಳಬೇಕೆಂದು ಯೋಗೇಶ್ ಕುಮಾರ್ ಮನವಿ ಮಾಡಿದ್ದಾರೆ.
ಯಾವುದೇ ಆಮಿಷ, ಒತ್ತಡ, ಪ್ರಭಾವ, ಆಣೆ, ಪ್ರಮಾಣಗಳಿಗೆ ಮತವನ್ನು ಮಾರಿಕೊಳ್ಳದೆ ಪ್ರಾಮಾಣಿಕರು ಹಾಗೂ ಯೋಗ್ಯರಿಗೆ ಮತ ನೀಡುವ ಮೂಲಕ ನೈಜ ದೇಶಭಕ್ತಿಯನ್ನು ಪ್ರದರ್ಶಿಸಬೇಕೆಂದು ಯೋಗೇಶ್ ಕುಮಾರ್ ಮನವಿ ಮಾಡಿದ್ದಾರೆ.