

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೊಸ ಕಾನೂನಿನಲ್ಲಿ ಡಿಜಿಟಲ್ ಅರೆಸ್ಟಿಗೆ ಸಂಬಂಧಿಸಿ ಯಾವುದೇ ಕಾನೂನು ಜಾರಿಯಲ್ಲಿಲ್ಲ. ಆದರೆ ಸ್ವಯಂಕೃತ ನಾವು ಬಳಸಿಕೊಳ್ಳುತ್ತಿರುವ ನವೀನ ತಂತ್ರಜ್ಞಾನ ಅಥವಾ ಇನ್ನಾವುದೇ ಸಾಮಾಜಿಕ ಜಾಲತಾಣದಿಂದ ರಕ್ಷಿಸಿಕೊಳ್ಳಲು ನಿರಂತರ ಎಚ್ಚರಿಕೆ ವಹಿಸಬೇಕು ಎಂದು ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾನೂನು ಮಂಟಪವು ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಿಜಿಟಲ್ ಅರೆಸ್ಟ್ ಎಚ್ಚರಿಕೆ ಹಾಗೂ ಕಾನೂನು ಜಾಗೃತಿ ಕುರಿತು ಉಪನ್ಯಾಸ ನೀಡಿದರು.
ದೇಶದಲ್ಲಿ ಹೊಸ ಕಾನೂನುಗಳು ಜಾರಿಯಾಗಬೇಕಾದರೆ ಸಂರ್ಪೂಣ ಚರ್ಚೆಯಾಗಿಲ್ಲ. ಬ್ರಿಟಿಷ್ ಸರ್ಕಾರ ರಚಿಸಿದ ಶೇ. 90ರಷ್ಟು ಹಳೆಯ ಕಾನೂನುಗಳು ಮುಂದುವರಿದಿವೆ. ಆದರೆ ಶೇ. 10ರಷ್ಟು ಮಾತ್ರ ಕಾನೂನುಗಳು ಹೊಸದಾಗಿ ಕೆಲ ಕಲಂಗಳ ಮೂಲಕ ತಿದ್ದುಪಡಿ ಆಗಿವೆ ಎಂದರು.
ಡಿಜಿಟಲ್ ಅರೆಸ್ಟ್ ಎಂದರೆ ಎಲ್ಲರಿಗೂ ಭಯ, ಹಿಂಜರಿಕೆ ಆಗಿದೆ. ಏಕೆಂದರೆ ಅದರಲ್ಲಿ ವ್ಯಕ್ತಿಯ ಸ್ವಾತಂತ್ರ್ಯ ಹರಣವಾಗುತ್ತದೆ. ಶಾರೀರಿಕ ಬಂಧನಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಡಿಜಿಟಲ್ ಅರೆಸ್ಟ್ ಕುರಿತು ನಾಗರಿಕರು ಭಯಪಡಬೇಕಿಲ್ಲ. ಇಲ್ಲಿ ಎಚ್ಚರಿಕೆ ಮುಖ್ಯ ಎಂದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಆನಂದಕುಮಾರ ಮಗದುಮ್ಮ ಮಾತನಾಡಿದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಎಸ್. ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಪೊಲೀಸ್ ಅಧಿಕಾರಿ ಎನ್.ಸಿ. ಕಾಡದೇವರ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಬಿ.ಎಸ್. ಸಂಗಟಿ, ಎನ್,ಎಸ್. ರಸಾಳಕರ, ಎನ್.ಎಸ್. ಭಟ್, ಎಸ್.ಬಿ. ಪಾಟೀಲ, ಡಾ. ಲಿಂಗರಾಜ ಅಂಗಡಿ, ಸಿ.ಎಸ್. ನಾಗಶೆಟ್ಟಿ, ಪ್ರಭಾವತಿ ದೇಸಾಯಿ, ಎನ್.ಆರ್. ಬಾಳಿಕಾಯಿ, ಚಂದ್ರಶೇಖರ ಮಹಾಜನಶೆಟ್ಟರ, ಇತರರು ಇದ್ದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಅಶೋಕ ಕೋರಿ ವಂದಿಸಿದರು.