

ಕೆ.ಆರ್.ಪೇಟೆ : ಯುವ ವಕೀಲರು ಕಾನೂನು ಪುಸ್ತಕಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ಬಡ ಕಕ್ಷಿದಾರರಿಗೆ ಶೀಘ್ರ ನ್ಯಾಯವನ್ನು ದೊರಕಿಸಿಕೊಡಲು ಮುಂದಾಗಬೇಕು ಎಂದು ಮಂಡ್ಯ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಎನ್.ಭೃಂಗೇಶ್ ಕರೆ ನೀಡಿದರು.
ತಾಲೂಕಿನ ವಕೀಲರ ಸಂಘದ ಆಹ್ವಾನದ ಮೇರೆಗೆ ಶನಿವಾರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಭೇಟಿ ನೀಡಿ ವಕೀಲರಿಂದ ಕುಂದುಕೊರತೆ ಆಲಿಸಿ, ಹೊಸ ಕಾನೂನುಗಳ ಕುರಿತ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾನೂನು ಪುಸ್ತಕದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಹಾಗೂ ತಿದ್ದುಪಡಿಗಳು ಸೇರಿದಂತೆ ಹೊಸದಾಗಿ ಕಾನೂನಿನ ಅಂಶಗಳು ಜಾರಿ ಆಗುತ್ತಿರುವುದರಿಂದ ವಕೀಲರು ಕಾನೂನು ಪುಸ್ತಕಗಳನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡು ಕೇಸಿನ ಆಳಕ್ಕೆ ಇಳಿದು ವಾದ ಮಂಡಿಸುವ ಮೂಲಕ ಕಕ್ಷಿದಾರರಿಗೆ ಸಾಧ್ಯವಾದಷ್ಟು ಶೀಘ್ರ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ವಕೀಲರಿಗೆ ಕಾನೂನು ಪುಸ್ತಕಗಳೇ ರಾಮಾಯಣ, ಭಗವದ್ಗೀತೆ ಗ್ರಂಥಗಳಿದ್ದಂತೆ ಎಂಬ ಸತ್ಯ ಅರಿತು ಹಣ, ಅಂತಸ್ತು ಹಾಗೂ ಕೀರ್ತಿಯ ಹಿಂದೆ ಬೀಳದೆ ಪ್ರತೀ ಕ್ಷಣವೂ ಒಳ್ಳೆಯದನ್ನೇ ಬಯಸಬೇಕು. ಬದ್ಧತೆಯಿಂದ ವಾದ ಮಂಡಿಸಿ ಕೇಸುಗಳಲ್ಲಿ ಗೆದ್ದರೆ ಹಣ ಮತ್ತು ಕೀರ್ತಿಯು ನಿಮ್ಮನ್ನೇ ಹಿಂಬಾಲಿಸುತ್ತದೆ. 20 ವರ್ಷಗಳ ಹಿಂದೆ ತಾವು ಸಿವಿಲ್ ನ್ಯಾಯಾಧಿಶರಾಗಿ ಕೆ.ಆರ್. ಪೇಟೆಯಲ್ಲಿ 4 ವರ್ಷಗಳ ಕಾಲ ಕೆಲಸ ಮಾಡಿದ ಅನುಭವಗಳನ್ನು ನೆನಪು ಮಾಡಿಕೊಂಡರು.
ಅಪರ ಸಿವಿಲ್ ನ್ಯಾಯಾಧಿಶರಾದ ಶಕುಂತಲಾ ಅವರು ಇದೇ ಮೊದಲ ಬಾರಿಗೆ ಜಿಲ್ಲಾ ನ್ಯಾಯಾಧಿಶರಾಗಿ ಆಗಮಿಸಿದ ಭೃಂಗೇಶ್ ಅವರನ್ನು ಕೆ.ಆರ್.ಪೇಟೆ ನ್ಯಾಯಾಲಯದ ವತಿಯಿಂದ ಗೌರವಿಸಿ ಅಭಿನಂದಿಸಿದರು. ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಪ್ರಧಾನ ಕಾರ್ಯದರ್ಶಿ ರಾಜೇಗೌಡ, ಉಪಾಧ್ಯಕ್ಷ ಬಿ. ಸಿ. ದಿನೇಶ್, ಹಿರಿಯ ವಕೀಲರಾದ ಎಸ್.ಸಿ.ವಿಜಯಕುಮಾರ್, ಬಿ. ಎಲ್.ದೇವರಾಜು, ಜಿ. ಆರ್. ಅನಂತರಾಮಯ್ಯ ಸೇರಿದಂತೆ ನೂರಾರು ವಕೀಲರು ಭಾಗವಹಿಸಿದ್ದರು.