ಪಕ್ಷಕ್ಕೆ ಮುಜುಗರ ತರುವುದು ಬೇಡ: ಬಿಜೆಪಿ ಮುಖಂಡರ ಸಲಹೆ

Published on

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಹಾಗಾಗಿ, ಟಿಕೆಟ್ ಘೋಷಣೆಗೂ ಮುನ್ನವೇ ಸಂಸದ ಪ್ರತಾಪಸಿಂಹ ವಿಚಲಿತರಾಗಿ ಭಾವನಾತ್ಮಕವಾಗಿ ಮಾತನಾಡಿ ಪಕ್ಷಕ್ಕೆ ಮುಜುಗರ ತರುವುದು ಬೇಡ ಎಂದು ಬಿಜೆಪಿ ಮುಖಂಡರು ಸಲಹೆ ನೀಡಿದ್ದಾರೆ.
ಟಿಕೆಟ್ ಘೋಷಣೆ ಆಗದಿರುವುದರಿಂದ ಈಗಲೂ ಟಿಕೆಟ್ ಸಿಗಬಹುದು. ಹಾಗಾಗಿ ಪ್ರತಾಪಸಿಂಹ ಅವರು ಆತಂಕಕ್ಕೆ ಒಳಗಾಗಿ ಮಾತಾಡುವುದು ಬೇಡ. ಕೇಂದ್ರದ ನಾಯಕರೊಂದಿಗೆ ಮಾತನಾಡಲು ಬೆಂಗಳೂರಿಗೆ ಹೋಗಿದ್ದಾರೆ. ಇನ್ನೂ ಚರ್ಚೆಗಳು ನಡೆಯುತ್ತಿವೆ. ಭಾವನಾತ್ಮಕವಾಗಿ ಮಾತನಾಡಿದರೆ ಪಕ್ಷ ಮುಜುಗರ ಅನುಭವಿಸಬೇಕಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ ಸಲಹೆ ನೀಡಿದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ರಾಜ್ಯದ ಯಾವ ನಾಯಕರಿಗೂ ಟಿಕೆಟ್ ಘೋಷಿಸುವ ಅಧಿಕಾರ ಇಲ್ಲ. ಕೇಂದ್ರದ ನಾಯಕರು ಅಂತಿಮವಾಗಿ ಟಿಕೆಟ್ ಯಾರಿಗೆ ಎಂದು ಹೇಳುತ್ತಾರೆ. ಹಾಗಾಗಿ ತಾಳ್ಮೆಗೆಡುವ ಅಗತ್ಯ ಇಲ್ಲ ಎಂದರು.
ಮೈಸೂರು ಲೋಕಸಭಾ ಟಿಕೆಟ್ ವಿಚಾರವಾಗಿ ಎರಡು ದಿನಗಳಿಂದ ಗೊಂದಲ ಶುರುವಾಗಿದೆ. ಪ್ರತಾಪಸಿಂಹ ಅವರ ಬದಲು ಬೇರೆ ಹೆಸರು ಮುನ್ನಲೆಗೆ ಬಂದಿದೆ. 10 ವರ್ಷಗಳ ಹಿಂದೆ ಪ್ರತಾಪಸಿಂಹ ಅವರು ಮೈಸೂರಿಗೆ ಬಂದಾಗ ಪರಿಚಯವೇ ಇರಲಿಲ್ಲ. ಅವರನ್ನು ಗೆಲ್ಲಿಸಿದೆವು. ಪ್ರತಾಪಸಿಂಹ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಪಕ್ಷದ ತೀರ್ಮಾನ ಒಪ್ಪಬೇಕಾಗುತ್ತದೆ. ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡಬೇಕಾಗುತ್ತದೆ ಎಂದು ವಿವರಿಸಿದರು.
ಪಕ್ಷದೊಳಗೆ ಯಾವುದೇ ಒಡಕಿಲ್ಲ. ಟಿಕೆಟ್ ಬದಲಿಸುವ ಪ್ರಯತ್ನವನ್ನೂ ಸ್ಥಳೀಯ ನಾಯಕರು ಮಾಡಿಲ್ಲ. ನಾಯಕರಾದ ಕೆ.ಎಸ್. ಈಶ್ವರಪ್ಪ ಅವರು ಅಭಿಪ್ರಾಯ ಸಂಗ್ರಹಿಸಿದ್ದರು. ಡಾ.ಮಂಜುನಾಥ್ ಮತ್ತು ಅಪ್ಪಚ್ಚು ರಂಜನ್ ಸೇರಿದಂತೆ ಹಲವರು ಟಿಕೆಟ್‌ಗೆ ಅಪೇಕ್ಷೆ ಪಟ್ಟಿದ್ದರು. ಟಿಕೆಟ್ ಅಪೇಕ್ಷೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಪ್ರತಾಪಸಿಂಹ ಅವರು ಫೇಸ್‌ಬುಕ್ ಲೈವ್‌ನಲ್ಲಿ ನಿಮ್ಮ ನಡವಳಿಕೆಯಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡರೆಂದು ಹೇಳಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಎಲ್.ನಾಗೇಂದ್ರ ಅವರು, ನನ್ನ ನಡವಳಿಕೆಯಿಂದ ಪಕ್ಷಕ್ಕೆ ಯಾವುದೇ ಮುಜುಗರವಾಗಿಲ್ಲ. ನನ್ನ ನಡವಳಿಕೆ ಸರಿ ಇದ್ದ ಕಾರಣಕ್ಕೆ ನನಗೆ ನಗರಾಧ್ಯಕ್ಷ ಸ್ಥಾನ ನೀಡಿದ್ದಾರೆ ಎಂದರು.
ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮುಖಂಡರಾದ ಸಂದೇಶ್‌ಸ್ವಾಮಿ, ಕೇಬಲ್ ಮಹೇಶ್, ಗಿರಿಧರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net