ಪದೇಪದೆ ಕೆಟ್ಟು ನಿಲ್ಲುವ ಬಸ್ ಓಡಿಸಬೇಡಿ

SIRSI BUS PROTEST
Published on

ಶಿರಸಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದಲ್ಲಿ ಬಸ್​ಗಳು ಪದೇಪದೆ ಕೆಟ್ಟು ನಿಲ್ಲುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿದ್ದು, ಈ ವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಸಾರ್ವಜನಿಕರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಅನಂತಮೂರ್ತಿ ಹೆಗಡೆ, ಬಸ್​ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಎಷ್ಟೇ ಮನವಿ ಮಾಡಿದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲ. ಎಷ್ಟೋ ಗ್ರಾಮೀಣ ಪ್ರದೇಶದ ಬಸ್​ಗಳು ವಾರದಲ್ಲಿ ಮೂರು ದಿನ ಕೆಟ್ಟು ನಿಲ್ಲುತ್ತಿವೆ. ರಸ್ತೆಯೂ ಸುಸ್ಥಿತಿಯಲ್ಲಿಲ್ಲ, ಬಸ್​ಗಳು ಸರಿಯಾದ ಸ್ಥಿತಿಯಲ್ಲಿಲ್ಲ. ಸರ್ಕಾರ ಈ ಭಾಗದ ಜನರ, ವಿದ್ಯಾರ್ಥಿಗಳ ಜೀವನದ ಜೊತೆ ಆಟ ಆಡುತ್ತಿದೆ ಎಂದು ಆರೋಪಿಸಿದರು.

ನಿವೃತ್ತ ಆರ್​ಟಿಒ ಜಿ. ಎಸ್. ಹೆಗಡೆ ಮಾತನಾಡಿ, ವಾಕರಸಾಸಂ ಈಗ ಯಾವ ಮಾರ್ಗದಲ್ಲಿ ಲಾಭ ಇದೆಯೋ ಆ ಮಾರ್ಗದಲ್ಲಿ ಮಾತ್ರ ಬಸ್​ಗಳನ್ನು ಓಡಿಸುತ್ತಿದೆ. ರಸ್ತೆ ಸಾರಿಗೆ ಸಂಸ್ಥೆಯ ಉದ್ದೇಶ ಲಾಭ ಗಳಿಸುವಿಕೆಯಲ್ಲ. ಬಸ್ ವ್ಯವಸ್ಥೆ ಸಮರ್ಪಕವಾಗಿದ್ದರೆ ಇಲ್ಲಿಯ ಪ್ರವಾಸೋದ್ಯಮವೂ ಬೆಳೆಯಲಿದೆ ಎಂದರು.

ಬಿಸಿಲುಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್್ಕ ಕುಪ್ಪಳ್ಳಿ, ವಿ.ಎಂ. ಹೆಗಡೆ ಕಬ್ಬೆ, ನಾರಾಯಣ ಹೆಗಡೆ ಮತ್ತಿಘಟ್ಟ, ಚಂದ್ರಕಾಂತ ಹೆಗಡೆ ನೇರ್ಲದ್ದ, ಇತರರಿದ್ದರು.

ಮನವಿ ಸ್ವೀಕರಿಸಿ ಮಾತನಾಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮಣ್ಣನವರ್, ಶೀಘ್ರವೇ ಶಿರಸಿ ವಿಭಾಗಕ್ಕೆ 300 ಹೊಸ ಬಸ್​ಗಳನ್ನು ಪೂರೈಸಲಾಗುತ್ತಿದ್ದು, ಹಳೆಯ ಬಸ್​ಗಳ ಬದಲಿಗೆ ಹೊಸ ಬಸ್ ಬಿಡಲಿದ್ದೇವೆ. ಮೆಕಾನಿಕ್ ವಿಭಾಗದಲ್ಲಿ ಕೊರತೆ ಇರುವುದು ನಿಜ, ಇನ್ನೂ 80ರಷ್ಟು ಮೆಕಾನಿಕ್​ಗಳು ಶಿರಸಿ ವಿಭಾಗಕ್ಕೆ ಅಗತ್ಯತೆ ಇದೆ. ಶಿರಸಿ ವಿಭಾಗದಲ್ಲಿ ಖಾಲಿ ಇರುವ 312 ಚಾಲಕರ ಹುದ್ದೆ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಈಗಾಗಲೇ 200 ಚಾಲಕರು ಆಗಮಿಸಿ ಕಾರ್ಯ ಆರಂಭಿಸಿದ್ದಾರೆ. ಇನ್ನು 112 ಚಾಲಕರು ಶೀಘ್ರದಲ್ಲಿಯೇ ಬರುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕ ಭಾಗದ ಚಾಲಕ ನಿರ್ವಾಹಕರೇ ಅಧಿಕ ಸಂಖ್ಯೆಯಲ್ಲಿದ್ದು, ಅವರು ತಮ್ಮ ತಮ್ಮ ಊರುಗಳಿಗೆ ವರ್ಗ ಮಾಡಿಸಿಕೊಂಡು ತೆರಳುತ್ತಿರುವುದರಿಂದ ಸಮಸ್ಯೆ ಆಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net